Advertisement

ಗಜಲ್‌ ಮನಸ್ಸು ಅರಳಿಸುವ ಸಾಹಿತ್ಯ ಪ್ರಕಾರ

06:05 PM Nov 25, 2021 | Team Udayavani |

ಬೆಳಗಾವಿ: ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪೃಥ್ವಿ ಫೌಂಡೇಶನ್‌ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಅನುಪಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಮತ್ತು ಸಾಹಿತಿ ನಾಗೇಶ ನಾಯಕ ಅವರು ರಚಿಸಿದ ಕೃತಿ ಬಿಡುಗಡೆ ಸಮಾರಂಭ ನಡೆಯಿತು.

Advertisement

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪೃಥ್ವಿ ಫೌಂಡೇಶನ್‌ ಅಧ್ಯಕ್ಷರಾದ ಡಾ. ಹೇಮಾವತಿ ಸೊನೋಳ್ಳಿ ಮಾತನಾಡಿ ಪ್ರಥ್ವಿ ಫೌಂಡೇಶನ್‌ ಸದಸ್ಯರಿಂದಲೇ ದೇಣಿಗೆ ಸಂಗ್ರಹಿಸಿ ವಿವಿಧ ಸಮಾಜಪರ ಕೆಲಸಗಳನ್ನು ಮಾಡುತ್ತಿದೆ. ದಾನಿಗಳಿಂದ ಬಂದ ಹಣವನ್ನು ಸಹ ನಿಸ್ವಾರ್ಥದಿಂದ ಸೇವೆಗಾಗಿಯೇ ಬಳಸುತ್ತಿದೆ ಎಂದರು.

ಸಾಹಿತಿ ನಾಗೇಶ ನಾಯಕ ಅವರು ಬರೆದ ಆತ್ಮಧ್ಯಾನದ ಬುತ್ತಿ ಗಜಲ್‌ ಗಳ ಸಂಕಲನವನ್ನು ಬಿಡುಗಡೆ ಮಾಡಿದ ಸಾಹಿತಿ ಡಾ. ಪಿ ಜೆ. ಕೆಂಪನ್ನವರ ಮಾತನಾಡಿ ಗಜಲ್‌ ಗಳು ಮನಸ್ಸನ್ನು ಮೋಹಿಸುವ ಮತ್ತು ಅರಳಿಸುವ ಸಾಹಿತ್ಯದ ಪ್ರಕಾರವಾಗಿದೆ. ಧ್ಯಾನ ಮಾಡಿದರೆ ಜ್ಞಾನ ತಾನಾಗಿಯೇ ಬೆಳೆಯುತ್ತೆ ಎಂಬ ನೀತಿಯನ್ನು ಹೇಳುವ ಗಜಲ್‌ ಗಳು ನಿಜಕ್ಕೂ ನಮ್ಮ ಜೀವನಕ್ಕೆ ಸಹಕಾರಿಯಾಗಿವೆ ಎಂದರು.

ಕೃತಿ ಪರಿಚಯಿಸಿ ಮಾತನಾಡಿದ ಸಾಹಿತಿ ಡಾ. ನಿರ್ಮಲಾ ಬಟ್ಟಲ ಅವರು, ನಮ್ಮಲ್ಲಿನ ಆತ್ಮದ ಚಿಂತನೆ ಮಾಡುತ್ತಾ ಧ್ಯಾನದಿಂದ ನಾವು ಪರಿಶುದ್ಧರಾಗೋಣ. ನಾವು ಅಸಹಾಯಕರಿಗೆ ಸಹಾಯ ಮಾಡಿದರೆ ನಾವೇ ದೇವರಾಗಬಹುದು. ಈ ನಿಟ್ಟಿನಲ್ಲಿ ಹಸಿವು, ಮನುಷ್ಯತ್ವ ಮರೆತವರು, ಜಾತೀಯತೆ ದ್ವೇಷ ಕಾರುವವರಿಗೂ ಪ್ರೀತಿ ಬಿತ್ತುವ ತುಡಿತದ ಗಜಲ್‌ ಗಳು ನಮ್ಮಲ್ಲಿ ಪರಿವರ್ತನೆ ಮಾಡುವ ರೀತಿಯಲ್ಲಿ ಮೂಡಿಬಂದಿವೆ ಎಂದು ಹೇಳಿದರು.

ಕೃತಿ ರಚನಾಕಾರ ನಾಗೇಶ ನಾಯಕ ಮಾತನಾಡಿ, ಇತ್ತೀಚಿಗೆ ಕೃತಿಗಳು ಬಿಡುಗಡೆಯಾದ ಜಿಲ್ಲೆಯಲ್ಲಿ ಮಾತ್ರ ಪ್ರಚಾರ ಪಡೆಯುತ್ತಿರುವುದರಿಂದ ಕೃತಿಕಾರರ ಪರಿಚಯ ನಾಡಿಗೆ ಆಗುತ್ತಿಲ್ಲ. ಅದಕ್ಕೆ ವಿವಿಧ ಜಿಲ್ಲೆಗಳಲ್ಲಿ ಕೃತಿಯನ್ನು ಬಿಡುಗಡೆ ಮಾಡುತ್ತಿದ್ದೇನೆ. ಅನೇಕರ ಪ್ರೇರಣೆ ನನಗೆ ಕೃತಿಗಳನ್ನು ಬರೆಯಲು ಸಹಕಾರಿಯಾಗಿದೆ ಎಂದರು .

Advertisement

ಫೌಂಡೇಶನ್‌ ನ ಸಹ ಕಾರ್ಯದರ್ಶಿ ರಶ್ಮಿ ಪಾಟೀಲ ಅವರು ಪ್ರಥ್ವಿ ಪೌಂಡೇಶನ್‌ ಆರು ವರ್ಷಗಳಲ್ಲಿ ನಡೆದು ಬಂದ ದಾರಿಯ ಬಗ್ಗೆ ಮಾಹಿತಿ ನೀಡಿದರು. ಸಾಹಿತಿ ಇಂದಿರಾ ಮೋಟೆಬೆನ್ನೂರು ಸಾಧಕರನ್ನು ಪರಿಚಯಿಸಿದರು. ಪ್ರಥ್ವಿ ಫೌಂಡೇಶನ್‌ ವತಿಯಿಂದ ಸಮಾಜದ ವಿವಿಧ ಸ್ತರಗಳಲ್ಲಿ ಸೇವೆಯನ್ನು ಸಲ್ಲಿಸಿದ ಶಾಂತಾ ಮಸೂತಿ, ಸುಧಾ ಪಾಟೀಲ, ಡಾ. ಶೈಲಜಾ ಕುಲಕರ್ಣಿಯವರಿಗೆ ಅನುಪಮಾ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಉ.ಕರ್ನಾಟಕ ಸಂಪರ್ಕ ಪ್ರತಿನಿಧಿಯಾದ ಶಶಿಧರ ಹಿರೇಮಠ ಅವರು ಈ ಭಾಗದ ಸಾಧಕಿಯರಾದ ಡಾ. ಹೇಮಾವತಿ ಸೊನೋಳ್ಳಿ, ಶಾಂತಾ ಮಸೂತಿ, ಮತ್ತು ಶಶಿಕಲಾ ಯಲಿಗಾರರವರಿಗೆ ಆತ್ಮಶ್ರೀ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಬೆಳಗಾವಿ ನಗರಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಜಿ ರಾಮಯ್ಯ, ಸಾಹಿತಿಗಳಾದ ಹಮೀದಾ ಬೇಗಮ್‌ ದೇಸಾಯಿ , ಜ್ಯೋತಿ ಮಾಳಿ ಸುರೇಖಾ ಮಾನ್ವಿ, ಜ್ಯೋತಿ ಬದಾಮಿ, ಶೆ„ಲಜಾ ಭಿಂಗೆ, ಜ್ಯೋತಿ ಮಾಳಿ, ಶೋಭಾ ತೆಲಸಂಗ, ಮಹಾನಂದ ಪಾರು ಶೆಟ್ಟಿ, ಜಯಶ್ರೀ ನಿರಾಹಾರಿ, ಶೆ„ಲಜಾ ಹಿರೇಮಠ, ಮಹಾದೇವಿ ಹಿರೇಮಠ, ರಶ್ಮಿ ಪಾಟೀಲ, ಲಲಿತಾ ಪರ್ವತರಾವ, ಶ್ರೀರಂಗ ಜೋಶಿ, ಎಂ.ವೈ.ಮೆಣಸಿನಕಾಯಿ, ಶಿವಾನಂದ ತಲ್ಲೂರ, ವೀರಭದ್ರಅಂಗಡಿ, ಮಧುಕರ ಗುಂಡೇನಟ್ಟಿ ಇದ್ದರು. ಹೇಮಾ ಬರಬರಿ ಪ್ರಾರ್ಥಿಸಿದರು. ಶೈಲಜಾ ಹಿರೇಮಠ ಸ್ವಾಗತಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು ವನೇಶ್ವರಿ ಪೂಜೇರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next