Advertisement

ಬಿಸಿಸಿಐ ಪ್ರಕಾರ ಕೊಹ್ಲಿ-ಕುಂಬ್ಳೆ ನಡುವೆ ವಿರಸವೇ ಇಲ್ಲವಂತೆ!

03:45 AM Jul 03, 2017 | Team Udayavani |

ನವದೆಹಲಿ: ಅನಿಲ್‌ ಕುಂಬ್ಳೆ ಮತ್ತು ವಿರಾಟ್‌ ಕೊಹ್ಲಿ ನಡುವೆ ವಿವಾದ ತಾರಕ್ಕೇರಿದ್ದು, ಪರಿಣಾಮ ಕೋಚ್‌ ಹುದ್ದೆಗೆ ಕುಂಬ್ಳೆ ರಾಜೀನಾಮೆ ನೀಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಬಿಸಿಸಿಐ ಪ್ರಕಾರ ಇಬ್ಬರ ನಡುವೆ ಯಾವುದೇ ಸಮಸ್ಯೆಯಾಗಿಲ್ಲ! 

Advertisement

ಹೌದು , ತಂಡದ ವ್ಯವಸ್ಥಾಪಕ ಕಪಿಲ್‌ ಮಲ್ಹೋತ್ರಾ ನೀಡಿರುವ ವರದಿಯಲ್ಲಿ ಇಬ್ಬರ ನಡುವಿನ ವಿರಸದ ಬಗ್ಗೆ ಒಂದೇ ಒಂದು ಘಟನೆ ಪ್ರಸ್ತಾಪವಾಗಿಲ್ಲವಂತೆ. ಹೀಗೆಂದು ಬಿಸಿಸಿಐ ಮಲ್ಹೋತ್ರಾ ವರದಿ ಉಲ್ಲೇಖೀಸಿ ಹೇಳಿಕೊಂಡಿದೆ.
ಸಾಮಾನ್ಯವಾಗಿ ಪ್ರತಿ ಸರಣಿಯಾದ ಮೇಲೆ ತಂಡದ ವ್ಯವಸ್ಥಾಪಕರು ವರದಿ ನೀಡುವುದು ಔಪಚಾರಿಕತೆ. ಆದರೆ ಈ ಬಾರಿ ಬಿಸಿಸಿಐ ಆಸಕ್ತಿ ವಹಿಸಿ ವರದಿ ಕೇಳಿತ್ತು. ಇಬ್ಬರ ನಡುವೆ ವಿರಸ ಉಂಟಾಗಿದ್ದರೆ ಅಂತಹ ನಿರ್ದಿಷ್ಟ ಘಟನೆಗಳನ್ನು ಉಲ್ಲೇಖೀಸಬೇಕು ಎಂದು ತಾಕೀತು ಮಾಡಿತ್ತು. ಆದರೆ ವ್ಯವಸ್ಥಾಪಕ ಮಲ್ಹೋತ್ರಾ ಅಂತಹ ಯಾವುದೇ ಘಟನೆ ಉಲ್ಲೇಖೀಸಿಲ್ಲ ಎಂದು ಬಿಸಿಸಿಐ ಹೇಳಿದೆ. ಈ ಮೂಲಕ ಇಬ್ಬರ ನಡುವೆ ವಿರಸವೇ ನಡೆದಿಲ್ಲ ಎಂದು ಹೇಳಿದೆ.

ಇಬ್ಬರ 6 ತಿಂಗಳಿಂದ ಮಾತುಕತೆಯೇ ಇರಲಿಲ್ಲವಲ್ಲ ಎಂಬ ಪ್ರಶ್ನೆಗೂ ಬಿಸಿಸಿಐನದ್ದು ಜಾಣ ಉತ್ತರವಾಗಿತ್ತು. ಮಲ್ಹೋತ್ರಾ ವರದಿಯಲ್ಲಿ ವಿರಸದ ಪ್ರಸ್ತಾಪವೇ ಇಲ್ಲ, ಹಾಗಿರುವಾಗ ಮಾತು ಬಿಡುವ ಪ್ರಶ್ನೆಯೆಲ್ಲಿ ಎಂದು ಕೇಳಿದೆ. ಗಮನಿಸಬೇಕಾದ ಸಂಗತಿಯೆಂದರೆ ಸ್ವತಃ ಕುಂಬ್ಳೆ ಕೋಚ್‌ ಹುದ್ದೆಗೆ ರಾಜೀನಾಮೆ ನೀಡುವಾಗ, ಕೊಹ್ಲಿಗೆ ಇಷ್ಟವಿಲ್ಲದಿರುವುದರಿಂದಲೇ ನಾನು ಈ ಕ್ರಮಕ್ಕೆ ಮುಂದಾಗಿದ್ದೇನೆಂದು ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next