ಆಳಂದ: ಹೊಲದಲ್ಲಿನ ವಿದ್ಯುತ್ ಟ್ರಾನ್ಸ್‌ಫಾರಂನಿಂದ ಆಕಸ್ಮಿಕ ಬೆಂಕಿ ತಗಲಿದ ಪರಿಣಾಮ ಕಟಾವಿಗೆ ಬಂದಿದ್ದ 12.30 ಎಕರೆ ಕಬ್ಬು ಸುಟ್ಟು ಬಸ್ಮವಾದ ಘಟನೆ ಶನಿವಾರ ನಿಂಬರಗಾ ಪೊಲೀಸ್ ಠಾಣೆಯ ವ್ಯಾಪ್ತಿಯ ಜಾವಳಿ (ಡಿ), ಗ್ರಾಮದಲ್ಲಿ ವರದಿಯಾಗಿದೆ.
ಗ್ರಾಮದ ಸೌಭಾಗ್ಯ ರಮೇಶ ಮೇತ್ರೆ 6 ಎಕರೆ, ಮಲ್ಲಿನಾಥ ಗರುಡಶೆಟ್ಟಿ 4.30 ಎಕರೆ ಮತ್ತು ಶರಣಬಸಪ್ಪ ಮಲ್ಲಿನಾಥ ಗರುಡಶೆಟ್ಟಿ 2 ಎಕರೆ, ರಮೇಶ ಶಿವುಪುತ್ರ ಮೇತ್ರೆ 1 ಎಕರೆ ಹೀಗೆ ಒಟ್ಟು 12.30 ಎಕರೆ ಕಬ್ಬು ಸುಟ್ಟು ಕರಕಲ್ಲಾಗಿ ರೈತರಿಗೆ ಅಪಾರ ಪ್ರಮಾಣದ ನಷ್ಟವಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಸಂಬಂಧಿತ ಇಲಾಖೆಯ ಸಿಬ್ಬಂದಿ ಅಂದಾಜಿಸಿದ್ದಾರೆ.
ರೈತ ರಮೇಶ ಶಿವುಪುತ್ರಪ್ಪಾ ಮೇತ್ರೆ ಎಂಬುವರ ಹೊಲದಲ್ಲಿನ ಟಿಸಿಗೆ ಅತಿಭಾರವಾಗಿ ವಿದ್ಯುತ್ ಅವಘಡ ಸಂಭವಿಸಿದ ಪರಿಣಾಮ ಬೆಂಕಿ ಆವರಿಸಿಕೊಂಡು ನೋಡು ನೋಡುತ್ತಿದ್ದಂತೆ ಕಬ್ಬು ಸುಟ್ಟು ಕರಕಲಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದಾವಿಸಿ ಬೆಂಕಿನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ. ಕಂದಾಯ ಇಲಾಖೆಯ ವಾಲಿಕಾರ ಶರಣಬಸಪ್ಪ ಎಂ. ಜಮಾದಾರ, ಪೊಲೀಸ್ ಸಿಬ್ಬಂದಿ ಪರಿಶೀಲಿಸಿದರು.
ಕಟಾವಿಗೆ ಬಂದ್ ಕಬ್ಬು ಸಕಾಲಕ್ಕೆ ಸಕ್ಕರೆ ಕಾರ್ಖಾನೆಗಳು ಪೂರೈಕೆ ಮಾಡದೆ ಇರುವುದು ಹಾಗೂ ರೈತರ ಹೊಲದಲ್ಲಿನ ವಿದ್ಯುತ್ ಟ್ರಾನ್ಸ್‌ಫಾರಂಗೆ ಅತಿಯಾದ ಭಾರವಾಗಿ ಅವಘಡದಿಂದ ಬೆಂಕಿ ಹತ್ತಿಕೊಂಡು ಜಾವಳಿ ರೈತರ ಕಬ್ಬು ಸುಟ್ಟು ನಷ್ಟವಾಗಿದೆ. ಕೂಡಲೇ ರೈತರ ಪ್ರತಿ ಎಕರೆಗೆ 1.25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಕಿಸಾನಸಭಾ ಜಿಲ್ಲಾ ಅಧ್ಯಕ್ಷ ಮೌಲಾ ಮುಲ್ಲಾ ಅವರು ಒತ್ತಾಯಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಈಗಾಗಲೇ ಕಬ್ಬು ಸುಟ್ಟ ರೈತರ ಹೊಲದಲ್ಲಿ 100 ಎಚ್‌ಪಿ ಟ್ರಾನ್ಸ್‌ಫಾರಂ ಇದ್ದು, ಇದಕ್ಕೆ ಪಂಪ್‌ಸೆಟ್‌ಗಳ ದ್ವಿಗುಣವಾಗಿ ಭಾರದಿಂದಾಗಿ ಈ ಅವಘಡ ಸಂಭವಿಸಿದೆ. ಕೂಡಲೇ ಮತ್ತೂಂದು ಟ್ರಾನ್ಸ್‌ಫಾರಂ ಅಳವಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ತಕ್ಷಣವೇ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.