ಶಹಾಬಾದ: ತಾಲೂಕಿನ ಮುತ್ತಗಾ ಗ್ರಾಮದಲ್ಲಿ ಕಟಾವಿಗೆ ಬಂದಿದ್ದ ವಿವಿಧ ರೈತರಿಗೆ ಸೇರಿದ ಸುಮಾರು 32.33 ಎಕರೆ ಕಬ್ಬಿನ ಬೆಳೆಗೆ ಗುರುವಾರ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಕಬ್ಬು ಸಂಪೂರ್ಣ ಭಸ್ಮವಾಗಿದೆ.
ಮುತ್ತಗಾ ಗ್ರಾಮದ ಮೈಲಾರಿ ಪ್ರಭು, ಚಂದ್ರಕಾಂತ ಮಲಕಪ್ಪ, ಗೌರಮ್ಮ ಪ್ರಭು, ಪ್ರಭು ಮೈಲಾರಿ, ಬಸವರಾಜ ಮಾಳಪ್ಪ, ತಿಪ್ಪಣ್ಣ ಬಸಲಿಂಗಪ್ಪ, ಶಕುಂತಲಾ ತಿಪ್ಪಣ್ಣ, ರಾಜಗೋಪಾಲ ರಾಮಚಂದ್ರ, ವಿರೇಶ ತಿಪ್ಪಣ್ಣ, ಸಾಬಣ್ಣ ದೊಡ್ಡಪ್ಪ ಅವರಿಗೆ ಸೇರಿದ ಸುಮಾರು 32.33 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಬೆಳೆಗೆ ಬೆಂಕಿ ತಗುಲಿದೆ.
ಇದನ್ನು ಕಂಡ ಅಕ್ಕ-ಪಕ್ಕದ ಜಮೀನಿನಲ್ಲಿದ್ದ ರೈತರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದರು. ಅಗ್ನಿಶಾಮಕ ವಾಹನ ಸ್ಥಳಕ್ಕೆ ಬರುವುದರೊಳಗೆ ಬೆಂಕಿ ಜಮೀನಿನ ಇತರೆ ಭಾಗಕ್ಕೆ ಹರಡದಂತೆ ತಡೆಯುವ ಉದ್ದೇಶದಿಂದ ಗ್ರಾಮಸ್ಥರು ನೀರು ಹಾಕಿ, ಗಿಡದ ತಪ್ಪಲಿನಿಂದ ನಂದಿಸಲು ಹರಸಾಹಸಪಟ್ಟಿದ್ದರು. ಆದರೆ ಗಾಳಿ ಹೆಚ್ಚಾಗಿದ್ದರಿಂದ ಬೆಂಕಿ ಜೋರಾಗಿ ಜಮೀನಿನ ಎಲ್ಲ ಬೆಳೆಗೆ ಹರಡಿತ್ತು. ಇದರಿಂದ ಒಂದು ಹೊಲದಿಂದ ಸುತ್ತಮುತ್ತಲಿನ ಕಬ್ಬಿನ ಗದ್ದೆಗೆ ಬೆಂಕಿ ವ್ಯಾಪಿಸಿ ಆಕಾಶದಲ್ಲಿ ದಟ್ಟ ಹೊಗೆ ಆವರಿಸಿತ್ತು. ಬೆಂಕಿಯ ಕೆನ್ನಾಲಿಗೆಯಿಂದ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.
ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಚಿತ್ತಾಪುರದಿಂದ ಎರಡು ಅಗ್ನಿಶಾಮಕ ವಾಹನಗಳು, ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ಕೈಗೊಂಡರು.
ಗ್ರೇಡ್-2 ತಹಶೀಲ್ದಾರ್ ಗುರುರಾಜ ಸಂಗಾವಿ, ಕಂದಾಯ ಅಧಿಕಾರಿ ಹಣಮಂತರಾವ ಪಾಟೀಲ, ಚಿತ್ತಾಪುರ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಸಂಜುಕುಮಾರ ಮಾನಕರ್, ಕೃಷಿ ಅಧಿಕಾರಿ ಕಾಶಿನಾಥ ದಂಡೋತಿ ಗದ್ದೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಪಿಆರ್ ಸಕ್ಕರೆ ಕಾರ್ಖಾನೆಯವರು ಸಮಯಕ್ಕೆ ಸರಿಯಾಗಿ ಕಬ್ಬು ಕಟಾವು ಮಾಡಿದ್ದರೆ ರೈತರು ಕಣ್ಣೀರು ಹಾಕುವ ಪರಿಸ್ಥಿತಿ ಬರುತ್ತಿರಲಿಲ್ಲ. ಲಕ್ಷಾಂತರ ರೂ. ಬೆಳೆ ಕಣ್ಣ ಮುಂದೆ ಬೆಂಕಿಗೆ ಆಹುತಿಯಾಗಿದನ್ನು ಕಂಡು ರೈತರು ಕಂಗಾಲಾಗಿದ್ದಾರೆ. ಅಧಿಕಾರಿಗಳಿಗೆ ಕರೆ ಮಾಡಿದರೇ ಯಾರೂ ಸ್ಪಂದಿಸುತ್ತಿಲ್ಲ. ಜಿಲ್ಲಾ ಧಿಕಾರಿಗಳು ಹಾಗೂ ಶಾಸಕರು ಕೂಡಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.
-ಬಸವರಾಜ ಕೋರಿ, ರೈತ ಮುಖಂಡ