Advertisement

ವಿದ್ಯುತ್‌ ವಿತರಣೆ ಕೇಂದ್ರದಲ್ಲಿ ಆಕಸ್ಮಿಕ ಬೆಂಕಿ

12:14 AM Feb 18, 2020 | Lakshmi GovindaRaj |

ಬೆಂಗಳೂರು: ಆನಂದ ರಾವ್‌ ವೃತ್ತದಲ್ಲಿರುವ ವಿದ್ಯುತ್‌ ವಿತರಣಾ ಕೇಂದ್ರದ ಆವರಣದಲ್ಲೇ ಆಕಸ್ಮಿಕ ಬೆಂಕಿಯಿಂದ 20 ಎಂವಿಎ ಸಾಮರ್ಥ್ಯದ ಎರಡು ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ಕೆಇಬಿ ಜಂಕ್ಷನ್‌ ಬಾಕ್ಸ್‌ಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದ್ದು, ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.

Advertisement

ಘಟನೆ ಹಿನ್ನೆಲೆಯಲ್ಲಿ ವಿಧಾನಸೌಧ ಸೇರಿ ಸುತ್ತ-ಮುತ್ತಲ ಕೆಲ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ಮಧ್ಯಾಹ್ನ 1.10 ರ ಸುಮಾರಿಗೆ ಕೇಂದ್ರದ ಆವರಣದಲ್ಲಿರುವ ಟ್ರಾನ್ಸ್‌ಫಾರ್ಮರ್‌ವೊಂದರಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡು ಬೆಂಕಿಯ ಕಿನ್ನಾಲಿಗೆ ಪಕ್ಕದಲ್ಲೇ ಇದ್ದ ಮತ್ತೂಂದು ಟ್ರಾನ್ಸ್‌ಫಾರ್ಮರ್‌ಗೆ ಆವರಿಸಿದೆ. ಗಾಬರಿಗೊಂಡ ಕಚೇರಿ ಸಿಬ್ಬಂದಿ ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು,

1.20ರ ಸುಮಾರಿಗೆ ನಾಲ್ಕು ವಾಹನಗಳಲ್ಲಿ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ದುರ್ಘ‌ಟನೆಯಲ್ಲಿ 20 ಎಂವಿಎ ಸಾಮರ್ಥ್ಯದ ಎರಡು ಭಾರೀ ಗಾತ್ರದ ಟ್ರಾನ್ಸ್‌ ಫಾರ್ಮರ್‌ಗಳು ಹಾಗೂ ಕೆಇಬಿ ಜಂಕ್ಷನ್‌ ಬಾಕ್ಸ್‌ ಗಳು ಬೆಂಕಿಗಾಹುತಿಯಾಗಿವೆ ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದರು.

ತಪ್ಪಿದ ಭಾರೀ ಅನಾಹುತ: ವಿತರಣಾ ಕೇಂದ್ರದ ಕೂಗಳತೆ ದೂರದಲ್ಲೇ ಆನಂದ್‌ರಾವ್‌ ವೃತ್ತವಿದ್ದು, ಸಾವಿರಾರು ವಾಹನಗಳು ಓಡಾಡುತ್ತವೆ. ಒಂದು ವೇಳೆ ಬೆಂಕಿಯ ತೀವ್ರತೆಗೆ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡಿದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು. ಅಷ್ಟರಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕಚೇರಿ ಸಿಬ್ಬಂದಿ ಕೂಡಲೇ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಅಷ್ಟೇ ವೇಗದಲ್ಲಿ ಆಗಮಿಸಿದ ಬೆಂಕಿ ಶಾಮಕ ಸಿಬ್ಬಂದಿ ಕೂಡ ಬೆಂಕಿ ನಂದಿಸಿದ್ದಾರೆ ಎಂದು ಕೆಪಿಟಿಸಿಎಲ್‌ನ ಸಿಬ್ಬಂದಿಯೊಬ್ಬರು ಹೇಳಿದರು.

ನಾಲ್ಕು ತಾಸು ವಿದ್ಯುತ್‌ ವ್ಯತ್ಯಯ: ಬೆಂಕಿ ಅವಘಡ ಹಿನ್ನೆಲೆಯಲ್ಲಿ ಈ ಕೇಂದ್ರದಿಂದ ವಿದ್ಯುತ್‌ ಸರಬರಾಜು ಮಾಡುತ್ತಿದ್ದ ವಿಧಾನಸೌಧ ಸೇರಿ ಸುತ್ತ-ಮುತ್ತಲ ಹತ್ತಾರು ಪ್ರದೇಶಗಳಲ್ಲಿ ನಾಲ್ಕು ಗಂಟೆಗೂ ಅಧಿಕ ಕಾಲ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ವಿಧಾನಸೌಧ, ರಾಜಭವನ, ಅವಿನ್ಯೂ ರಸ್ತೆ, ಚಿಕ್ಕಪೇಟೆ, ಗಾಂಧಿನಗರ, ಮೆಜೆಸ್ಟಿಕ್‌, ಕಾಟನ್‌ಪೇಟೆ, ಶೇಷಾದ್ರಿಪುರ, ಮಲ್ಲೇಶ್ವರ, ವಸಂತನಗರ ಹಾಗೂ ಇತರೆಡೆ ವಿದ್ಯುತ್‌ ವ್ಯತ್ಯಯವಾಗಿತ್ತು.

Advertisement

ತಿಳಿಯದ ನಿಖರ ಕಾರಣ: ಟ್ರಾನ್ಸ್‌ಫಾರ್ಮರ್‌ನಲ್ಲಿದ್ದ ಬಾಯ್ಲರ್‌ ಬಿಸಿಯಾಗಿ ಅಥವಾ ಆಯಿಲ್‌ ಸೋರಿಕೆಯಿಂದ ಅಗ್ನಿ ಅವಘಡ ಸಂಭವಿಸಿರುವ ಸಾಧ್ಯತೆಯಿದೆ. ಆದರೆ, ಇದೇ ಕಾರಣದಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲು ಆಗುವುದಿಲ್ಲ. ಮುಖ್ಯ ಎಂಜಿನಿಯರ್‌ ಹಾಗೂ ತಾಂತ್ರಿಕ ಸಿಬ್ಬಂದಿ ಸ್ಥಳ ಪರಿಶೀಲಿಸಿದ್ದು, ನಂತರ ಸ್ಪಷ್ಟ ಕಾರಣ ಗೊತ್ತಾಗಲಿದೆ. ಘಟನೆಯಿಂದ ನಗರದ ಕೆಲವೆಡೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ. ಈಗಾಗಲೇ 15 ಘಟಕಗಳಿಂದ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೂ ಒತ್ತಡ ಅಧಿಕವಾಗುವುದರಿಂದ ವಿದ್ಯುತ್‌ ವೋಲ್ಟೆಜ್‌ ಕಡಿಮೆಯಾಗಬಹುದು ಎಂದು ಕೆಪಿಟಿಸಿಎಲ್‌ನ ಮುಖ್ಯ ಎಂಜಿನಿಯ ರೊಬ್ಬರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next