Advertisement

ಅಪಘಾತ ರಹಿತ ಚಾಲನೆಗೆ ಆದ್ಯತೆ ಅಗತ್ಯ

05:10 PM Jul 15, 2022 | Team Udayavani |

ಹಾವೇರಿ: ಅಪಘಾತ ರಹಿತ ವಾಹನ ಚಾಲನೆಯಿಂದ ಸಾರಿಗೆ ಸಂಸ್ಥೆಗಳಿಗೆ ಆರ್ಥಿಕ ಹೊರೆ ಕಡಿಮೆಯಾಗಿಸುವ ಜೊತೆಗೆ ಸಾರ್ವಜನಿಕರ ಪ್ರಾಣ ಹಾನಿ ತಡೆಯಬಹುದು. ಈ ಹಿನ್ನೆಲೆಯಲ್ಲಿ ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಡಿವೈಎಸ್ಪಿ ಎಂ.ಎಸ್‌.ಪಾಟೀಲ ಹೇಳಿದರು.

Advertisement

ನಗರದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗೀಯ ಕಚೇರಿ ಸಭಾಂಗಣದಲ್ಲಿ ಅಪಘಾತ ರಹಿತ ಚಾಲನಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವಾಹನ ಚಾಲಕರು ಅಪಘಾತಗಳು ಸಂಭವಿಸದಂತೆ ಬಹಳ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು. ಚಾಲಕರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿದ್ದಲ್ಲಿ ಅಪಘಾತಗಳು ಸಂಭವಿಸುವುದು ವಿರಳ. ಆದ್ದರಿಂದ, ಚಾಲಕರು ಸರಿಯಾದ ಸಮಯಕ್ಕೆ ನಿದ್ದೆ ಮಾಡಿ, ವಿಶ್ರಾಂತಿ ಪಡೆದು ಸಮಚಿತ್ತದಿಂದ ವಾಹನ ಚಲಾಯಿಸಬೇಕೆಂದು ಹೇಳಿದರು.

ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ್‌ ಮಾತನಾಡಿ, ಅಪಘಾತ ಆಕಸ್ಮಿಕವಾಗಿ ಸಂಭವಿಸುತ್ತವೆ. ಚಾಲಕರು ನಿರ್ಲಕ್ಷ್ಯ ವಹಿಸದೇ ಜಾಗ್ರತೆಯಿಂದ ವಾಹನ ಚಲಾಯಿಸಬೇಕು. ಇತ್ತೀಚೆಗೆ ಕೆಲವು ವರ್ಷಗಳಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಅಪಘಾತಗಳನ್ನು ತಪ್ಪಿಸಲು ಸಾಕಷ್ಟು ಮುಂಜಾಗ್ರತೆ ವಹಿಸುತ್ತಿದೆ. ಅಜಾಗರೂಕತೆ ಅಥವಾ ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸುವ ಚಾಲಕ ಮತ್ತು ನಿರ್ವಾಹಕರ ಮೇಲೆ ಹದ್ದಿನ ಕಣ್ಣಿರಿಸಲಾಗುತ್ತಿದೆ. ಹಾಗಾಗಿ, ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಅಪಘಾತಕ್ಕೀಡಾಗುವುದು ಕಡಿಮೆಯಾಗಿದೆ ಎಂದು ಹೇಳಿದರು.

ಕೆಎಸ್‌ಆರ್‌ಟಿಸಿ ಪ್ರಯಾಣಿಕರ ಪಾಲಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆಯಾಗಿ ಬದಲಾಗುತ್ತಿದೆ. ಚಾಲಕರಲ್ಲಿ ಸಮಯ ಪ್ರಜ್ಞೆ, ಮುಂಜಾಗರೂಕತೆಗಳ ಜತೆಗೆ ಸಂಸ್ಥೆ ಕಡೆಯಿಂದ ಕಾಲಕಾಲಕ್ಕೆ ನೀಡಲಾಗುತ್ತಿರುವ ತರಬೇತಿ ಹಾಗೂ ಕಟ್ಟು ನಿಟ್ಟಿನ ನಿಯಮಾವಳಿಗಳು ಪೂರಕವಾಗಿವೆ ಎಂದರು.

Advertisement

ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಂಬಾಬಾ ಮುದ್ದೇಬಿಹಾಳ ಮಾತನಾಡಿ, ದೇಶದಲ್ಲಿ ಅನಾರೋಗ್ಯದ ಹೊರತಾಗಿಯೂ ಹೆಚ್ಚಾಗಿ ರಸ್ತೆ ಅಪಘಾತದಲ್ಲಿ ಮರಣ ಹೊಂದುತ್ತಿರುವವರ ಸಂಖ್ಯೆ ಅಧಿ ಕವಾಗಿದೆ. ಇದಕ್ಕೆ ವಾಹನ ಚಾಲಕರ ನಿರ್ಲಕ್ಷ್ಯ ಮತ್ತು ಅಜಾಗರೂಕತೆ ಕಾರಣವಾಗಿದೆ. ವಾಹನಗಳನ್ನು ವೇಗವಾಗಿ ಚಲಾಯಿಸಬಾರದು. ಕುಟುಂಬದ ಸಮಸ್ಯೆ ಮತ್ತು ಕಚೇರಿ ಕೆಲಸದ ಒತ್ತಡದಲ್ಲಿ ವಾಹನ ಚಲಾಯಿಸುವುದರಿಂದ ಅಪಘಾತ ಸಂಭವಿಸುವುದು ಹೆಚ್ಚಾಗಿದೆ. ಕಾರಣ ವಾಹನ ಚಾಲಕರು ಏಕಾಗ್ರತೆಯಿಂದ ವಾಹನ ಚಲಾಯಿಸಬೇಕೆಂದು ಸಲಹೆ ನೀಡಿದರು.

ಒಂದೊಮ್ಮೆ ಅಪಘಾತ ಸಂಭವಿಸಿದಲ್ಲಿ ವಾಹನ ಚಾಲಕನ ಮೇಲೆ ಸೆಕ್ಷನ್‌ 279ರ ಅಡಿ ಕ್ರಿಮಿನಲ್‌ ಕೇಸ್‌ ದಾಖಲಿಸಿ ವಾಹನ ಚಾಲನಾ ಪರವಾನಗಿ ರದ್ದುಪಡಿಸಿ, ಜೈಲು ಶಿಕ್ಷೆ ವಿಧಿ ಸಲಾಗುತ್ತದೆ. ಆದ್ದರಿಂದ, ಚಾಲಕರು ಸುರಕ್ಷಿತವಾಗಿ ವಾಹನ ಚಲಾಯಿಸಬೇಕೆಂದು ಹೇಳಿದರು.

ಹುಬ್ಬಳ್ಳಿ ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲ ನಾರಾಯಣಪ್ಪ ಕುರುಬರ ಮಾತನಾಡಿ, ಕೆಎಸ್‌ಆರ್‌ಟಿಸಿ ಸಂಸ್ಥೆ ಪ್ರತಿ ವರ್ಷ 30 ಕೋಟಿ ರೂ. ಅಪಘಾತ ಪರಿಹಾರ ಪಾವತಿಸುತ್ತಿದೆ. ಇದಕ್ಕೆ ಸಂಸ್ಥೆಯ ಚಾಲಕರ ನಿರ್ಲಕ್ಷ್ಯತನ, ಅಜಾಗರೂಕತೆಯೇ ಕಾರಣವಾಗಿದೆ. ಹಾವೇರಿ ವಿಭಾಗದಿಂದ ಕಳೆದ ಏಳು ವರ್ಷದಲ್ಲಿ 22.16 ಕೋಟಿ ರೂ. ಅಪಘಾತ ಪರಿಹಾರ ಪಾವತಿಸಿದೆ. ಇದೇ ರೀತಿ, ಮುಂದುವರೆದಲ್ಲಿ ಸಂಸ್ಥೆ ಆರ್ಥಿಕವಾಗಿ ನಷ್ಟ ಅನುಭವಿಸುತ್ತದೆ. ಆದ್ದರಿಂದ ಎಲ್ಲರೂ ಶಿಸ್ತುಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಹೇಳಿದರು.

ಕಾರ್ಯಾಗಾರದಲ್ಲಿ ಹುಬ್ಬಳ್ಳಿ ಕೇಂದ್ರ ಕಚೇರಿ ಉಪ ಮುಖ್ಯಯೋಜನಾ ಮತ್ತು ಅಂಕಿ ಸಂಖ್ಯಾಧಿಕಾರಿ ಮಹದೇವಪ್ಪ ಮುಂಜಿ, ಹಾವೇರಿ ವಿಭಾಗೀಯ ಭದ್ರತಾ ಮತ್ತು ಜಾಗೃತಾಧಿಕಾರಿ ವಿ.ಎಚ್‌.ಜಗದೀಶ, ಹಾವೇರಿ ವಿಭಾಗೀಯ ಕಚೇರಿ ಆಡಳಿತಾಧಿಕಾರಿ ದಿವಾಕರ ಕೆ., ಹಾವೇರಿ ಶಹರ ಸಿಪಿಐ ಸುರೇಶ ಸಗರಿ, ಅಂಕಿಸಂಖ್ಯೆ ಸಹಾಯಕ ಸಂಚಾರ ಶಾಖೆಯ ವಿವೇಕಾನಂದ, ವಿಭಾಗೀಯ ಕಾರ್ಯಾಗಾರದ ಸಹಾಯಕ ಕುಶಲಕರ್ಮಿ ಚಂದ್ರು ಲಿಂಗಣ್ಣನವರ, ಸತೀಶ ಕಾಡನವರ ಇದ್ದರು.

ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು.ಇತ್ತೀಚಿನ ಕೆಲವು ವರ್ಷಗಳಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಅಪಘಾತಗಳನ್ನು ತಪ್ಪಿಸಲು ಸಾಕಷ್ಟು ಮುಂಜಾಗ್ರತೆ ವಹಿಸುತ್ತಿದೆ. ಅಜಾಗರೂಕತೆ ಅಥವಾ ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸುವ ಚಾಲಕ ಮತ್ತು ನಿರ್ವಾಹಕರ ಮೇಲೆ ಹದ್ದಿನ ಕಣ್ಣಿರಿಸಲಾಗುತ್ತಿದೆ. ಹಾಗಾಗಿ, ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ ಗಳು ಅಪಘಾತಕ್ಕೀಡಾಗುವುದು ಕಡಿಮೆಯಾಗಿದೆ. –ಅಶೋಕ ಪಾಟೀಲ್‌, ವಿಭಾಗೀಯ ಸಂಚಾರ ಅಧಿಕಾರಿ

 

Advertisement

Udayavani is now on Telegram. Click here to join our channel and stay updated with the latest news.

Next