ಸುರತ್ಕಲ್ : ಇಲ್ಲಿನ ಹೊಸಬೆಟ್ಟು ತಿರುವಿನಲ್ಲಿ ಇಂದು ಬೆಳಿಗ್ಗೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಮಿನಿ ಬಸ್ ಒಂದಕ್ಕೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿದ್ದ ವಿದ್ಯಾರ್ಥಿಗಳಿಬ್ಬರು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಶಾಲಾ ಮಕ್ಕಳನ್ನು ಕರೆತರಲು ತೆರಳುತ್ತಿದ್ದ ಮಿನಿ ಬಸ್ ಹೊಸಬೆಟ್ಟು ಬಳಿ ಮುಖ್ಯ ರಸ್ತೆಯಿಂದ ಒಳರಸ್ತೆಗೆ ತಿರುಗುವ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಬರುತ್ತಿದ್ದ ಲಾರಿ ನೇರವಾಗಿ ಮಿನಿ ಬಸ್ಸಿನ ಎಡಬದಿಗೆ ಢಿಕ್ಕಿ ಹೊಡೆದಿದೆ.
ಅಪಘಾತದ ಸಂದರ್ಭದಲ್ಲಿ ಬಸ್ಸಿನಲ್ಲಿ ಕೇವಲ ಇಬ್ಬರೇ ಮಕ್ಕಳಿದ್ದ ಕಾರಣ ಅದೃಷ್ಟವಶಾತ್ ಸಂಭಾವ್ಯ ಭಾರೀ ದುರಂತ ತಪ್ಪಿದೆ. ಆದರೆ ಇಬ್ಬರು ಮಕ್ಕಳಿಗೆ ಗಾಯಗಳಾಗಿದ್ದು ಅವರನ್ನು ಸುರತ್ಕಲ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ಕಾಲಿಗೆ ಹೊಲಿಗೆ ಹಾಕಲಾಗಿದೆ.
ಲಾರಿ ಢಿಕ್ಕಿ ಹೊಡೆದ ಪರಿಣಾಮ ಬಸ್ಸು ಪಕ್ಕದಲ್ಲೇ ಇದ್ದ ಟ್ರಾನ್ಸ್ ಫಾರ್ಮರ್ ಕಂಬಕ್ಕೆ ಒರಗಿ ನಿಂತಿದೆ. ಒಂದುವೇಳೆ ಕಂಬ ಮುರಿದುಬೀಳುತ್ತಿದ್ದರೆ ಇನ್ನಷ್ಟು ಅಪಾಯ ಉಂಟಾಗುವ ಸಾಧ್ಯತೆ ಇತ್ತು ಎನ್ನುವುದು ಪ್ರತ್ಯಕ್ಷದರ್ಶಿಗಳ ಅಬಿಪ್ರಾಯ.
ಅಪಘಾತಕ್ಕೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.