ಗುಂಡ್ಲುಪೇಟೆ (ಚಾಮರಾಜನಗರ): ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ತಂದೆ, ಮಗ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಹಿರೀಕಾಟಿ ಗೇಟ್ ಬಳಿ ನಡೆದಿದೆ.
ಬೈಕ್ ನಲ್ಲಿ ತೆರಳುತಿದ್ದ ನಂಜನಗೂಡು ಮೂಲದ ಶಶಿಕುಮಾರ್(35) ಹಾಗೂ ದರ್ಶನ್(6) ಸ್ಥಳದಲ್ಲೇ ಮೃತಪಟ್ಟವರು. ಇನ್ನು ಶಶಿಕುಮಾರ್ ಪತ್ನಿ ಚೈತ್ರಾ ಹಾಗೂ ಮತ್ತೋರ್ವ ಮಗ ಗಗನ ಬೇಗೂರಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಮೈಸೂರಿನ ಆಸ್ಪತ್ರೆ ರವಾನಿಸಲಾಗಿದ್ದು, ಅವರಿಬ್ಬರ ಸ್ಥಿತಿಯೂ ಗಂಭೀರವಾಗಿದೆ ಎನ್ನಲಾಗಿದೆ.
ಮೈಸೂರಿನಿಂದ ಗುಂಡ್ಲುಪೇಟೆ ಕಡೆಗೆ ಬರುತ್ತಿದ್ದ ತಮಿಳುನಾಡು ಮೂಲದ ಕಾರು ಪೆಟ್ರೋಲ್ ಬಂಕ್ ಗೆ ತುರ್ತಾಗಿ ಎಡಕ್ಕೆ ತಿರುಗಿದ್ದರಿಂದ ಬೈಕ್ ನಡುವೆ ಮುಖಾಮುಖಿ ಢಿಕ್ಕಿಯಾಗಿ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ.
ಬೇಗೂರಿನ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಎರಡು ಮೃತ ದೇಹಗಳನ್ನು ರವಾನಿಸಲಾಗಿದ್ದು, ಈ ಕುರಿತು ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.