ಬೆಂಗಳೂರು: ಶಿವರಾಮ ಕಾರಂತ ಬಡಾವಣೆಯ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆಯಿಂದ ತಮ್ಮ ಜಮೀನು ಕೈ ಬಿಡಬೇಕು ಎಂದು ಕೋರಿ ನಕಲಿ
ದಾಖಲೆಗಳನ್ನು ಸೃಷ್ಟಿಸಿ ಸಲ್ಲಿಕೆಯಾಗಿದ್ದ ಆಕ್ಷೇಪಣಾ ಅರ್ಜಿಗಳನ್ನು ಸ್ವೀಕರಿಸಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಕ್ರಮ ಎಸಗಿದ್ದಾರೆ
ಎಂದು ಭ್ರಷ್ಟಾಚಾರ ನಿಗ್ರಹ ದಳ ಹೈಕೋರ್ಟ್‌ಗೆ ತಿಳಿಸಿದೆ.
ಎಸಿಬಿ ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್‌ಗಳ ಮುಂದಿನ ಪ್ರಕ್ರಿಯೆಗಳಿಗೆ ಮಧ್ಯಂತರ ತಡೆಯಾಜ್ಞೆ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾ.ಅರವಿಂದಕುಮಾರ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ಎಸಿಬಿ ಪರ ವಕೀಲರು ಈ
ವಿವರಣೆ ನೀಡಿದರು. ಎಸಿಬಿ ಪರ ವಕೀಲರ ಪ್ರತಿವಾದ ಆಲಿಸಿದ ನ್ಯಾಯಪೀಠ, ಈ ಹಿಂದೆ ನೀಡಿದ್ದ ಸೂಚನೆಯಂತೆ ಮುಂದಿನ ವಿಚಾರಣೆಯವರೆಗೆ ಅರ್ಜಿದಾರರನ್ನು ಬಂಧಿಸದಂತೆ ಮೌಖೀಕವಾಗಿ ಎಸಿಬಿಗೆ ತಾಕೀತು ಮಾಡಿತು. ಜೊತೆಗೆ ಅರ್ಜಿದಾರರು ಕೋರಿರುವ ಮಧ್ಯಂತರ ತಡೆಯಾಜ್ಞೆಗೆ ಆಕ್ಷೇಪಣೆ ಸಲ್ಲಿಸುವಂತೆ ಎಸಿಬಿ ಪರ ವಕೀಲರಿಗೆ ಸೂಚಿಸಿ ಆಗಸ್ಟ್ 30ಕ್ಕೆ ವಿಚಾರಣೆ ಮುಂದೂಡಿದೆ.
ಇದಕ್ಕೂ ಮೊದಲು ನಡೆದ ವಿಚಾರಣೆ ವೇಳೆ ವಾದ ಮಂಡಿಸಿದ ಎಸಿಬಿ ಪರ ವಕೀಲರು, ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಡಿ.31ಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿ, 2010ರಲ್ಲಿ ಆಕ್ಷೇಪಣೆ ಆಹ್ವಾನಿಸಲಾಗಿತ್ತು. ಈ ವೇಳೆ ನಿಯಮ ಬಾಹಿರವಾಗಿ ಖುದ್ದು ಸಿಎಂ ಆಕ್ಷೇಪಣಾ ಅರ್ಜಿಗಳನ್ನು ಸ್ವೀಕರಿಸಿದ್ದಾರೆ. ಅಲ್ಲದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಶಾ ಪರದೇಸಿ ಎಂಬ ಮಹಿಳೆ ಹೆಸರಿನಲ್ಲಿಯೂ ಆಕ್ಷೇಪಣೆ ಸ್ವೀಕೃತವಾಗಿದ್ದು, ಅದರಲ್ಲಿ ಅರ್ಜಿದಾರಳಾದ ಆಕೆಯ ಸಹಿ ಅಥವಾ ದಿನಾಂಕ ನಮೂದಾಗಿಲ್ಲ. ಹೀಗಿದ್ದರೂ ಬಿಎಸ್‌ವೈ ಅರ್ಜಿದಾರಳ ಪರವಾಗಿ ಭೂ ಸ್ವಾಧೀನ ಪ್ರಕ್ರಿಯಿಂದ ಕೈ ಬಿಡುವಂತೆ ಆದೇಶಿಸಿ ಅಕ್ರಮ ಎಸಗಿದ್ದಾರೆ. ಇದೇ ರೀತಿಯ 28ಕ್ಕೂ ಅಧಿಕ ಅರ್ಜಿಗಳನ್ನು ಅವರೇ ಸ್ವೀಕರಿಸಿದ್ದಾರೆ. ಈ ಪ್ರಕರಣದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿಯೇ ಅಕ್ರಮ ಎಸಗಿದ್ದಾರೆ ಎನ್ನಲು ಪುಷ್ಟಿ ದೊರೆತಿದೆ ಎಂದರು.
ಮುಂದಿನ ದಿನಗಳಲ್ಲಿ ಬಿಎಸ್‌ವೈ ಮುಖ್ಯಮಂತ್ರಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ನೂತನ ಸಿಎಂ ಆಗಿ ನೇಮಕಗೊಂಡ ಡಿ.ವಿ.ಸದಾನಂದ ಗೌಡ, ವಿಧಾನಸಭೆ ಅಧಿವೇಶನದಲ್ಲಿ ಶಿವರಾಮ ಕಾರಂತ ಬಡಾವಣೆಯಲ್ಲಿ ಅಕ್ರಮ ನಡೆದಿರುವ ಆರೋಪ ಸಂಬಂಧ ತನಿಖೆ ನಡೆಸುವುದಾಗಿ ಏಪ್ರಿಲ್ 3, 2012ರಲ್ಲಿ ಘೋಷಿಸಿದ್ದಾರೆ. ಅದರಂತೆ ಈ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಆದರೆ, ಬದಲಾದ ಸನ್ನಿವೇಶಗಳಲ್ಲಿ ಸಿಐಡಿ ತನಿಖೆ ನನೆಗುದಿಗೆ ಬಿತ್ತು. ಈ ಅಂಶಗಳೇ ಅರ್ಜಿದಾರರು ಈ ಪ್ರಕರಣದಲ್ಲಿ ಅಕ್ರಮ ಎಸಗಿರುವುದು ಗೊತ್ತಾಗಲಿದೆ. ಈ ನಿಟ್ಟಿನಲ್ಲಿ ಎಸಿಬಿ ತನಿಖೆಗೆ ತಡೆಯಾಜ್ಞೆ ನೀಡಬಾರದು ಎಂದು ಕೋರಿದರು.