ನವದೆಹಲಿ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಬಿಹಾರ ಸರ್ಕಾರದ ಶಿಫಾರಸ್ಸನ್ನು ಸ್ವೀಕರಿಸಿರುವುದಾಗಿ ಕೇಂದ್ರ ಸರ್ಕಾರ ಬುಧವಾರ (ಆಗಸ್ಟ್ 05-2020) ಸುಪ್ರೀಂಕೋರ್ಟ್ ಗೆ ತಿಳಿಸಿದೆ.
ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ವಿಚಾರದಲ್ಲಿ ಬಿಹಾರ ಮತ್ತು ಮಹಾರಾಷ್ಟ್ರದ ನಡುವೆ ರಾಜಕೀಯ ಸಮರ ತಾರಕಕ್ಕೇರಿತ್ತು. ಕಳೆದ ಫೆಬ್ರುವರಿ ತಿಂಗಳಿನಲ್ಲಿಯೇ ಮಗ ಸುಶಾಂತ್ ಸಿಂಗ್ ಜೀವಕ್ಕೆ ಬೆದರಿಕೆ ಇದೆ ಎಂದು ಮುಂಬೈ ಪೊಲೀಸರಿಗೆ ತಿಳಿಸಿದ್ದರೂ ಕೂಡಾ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲವಾಗಿತ್ತು ಎಂದು ಸುಶಾಂತ್ ತಂದೆ ಕೆಕೆ ಸಿಂಗ್ ಆರೋಪಿಸಿದ ನಂತರ ಮಂಗಳವಾರ (ಆಗಸ್ಟ್ 04-2020) ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು ಎಂದು ವರದಿ ತಿಳಿಸಿದೆ.
ಸುಶಾಂತ್ ಸಾವಿನ ಪ್ರಕರಣದಲ್ಲಿ ಬಿಹಾರ ಪೊಲೀಸರಿಗೆ ಯಾವುದೇ ರೀತಿಯ ಸಂಬಂಧ ಇಲ್ಲ. ಪಾಟ್ನಾದಲ್ಲಿ ಎಫ್ ಐಆರ್ ದಾಖಲಿಸಿರುವುದು ರಾಜಕೀಯ ಪ್ರೇರಿತವಾಗಿದೆ. ಹೀಗಾಗಿ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಬಗ್ಗೆ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ವಿರೋಧಿಸಿತ್ತು ಎಂದು ವರದಿ ವಿವರಿಸಿದೆ.
ಜೂನ್ 14ರಂದು ಮುಂಬೈನ ಬಾಂದ್ರಾದಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಘಟನೆ ನಂತರ ಮುಂಬೈ ಪೊಲೀಸರು ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
ಅಲ್ಲದ ಇಂದು (ಆಗಸ್ಟ್ 05-2020) ಸುಪ್ರೀಂಕೋರ್ಟ್ ಸುಶಾಂತ್ ಸಿಂಗ್ ರಜಪೂತ್ ಗೆಳೆಯ ಹಾಗೂ ನಟಿ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತ್ತು. ಸಿಂಗ್ ಪ್ರಕರಣದ ಬಗ್ಗೆ ಪಾಟ್ನಾದಲ್ಲಿ ದಾಖಲಾಗಿದ್ದ ಎಫ್ ಐಆರ್ ಅನ್ನು ಮುಂಬೈಗೆ ವರ್ಗಾಯಿಸುವಂತೆ ಕೋರಿ ಇಬ್ಬರೂ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು.
ರಿಯಾ ಚಕ್ರವರ್ತಿ ಸಲ್ಲಿಸಿದ್ದ ಅರ್ಜಿ ಬಗ್ಗೆ ಬಿಹಾರ, ಮಹಾರಾಷ್ಟ್ರ, ಕೇಂದ್ರ ಸರ್ಕಾರ ಹಾಗೂ ಸುಶಾಂತ್ ತಂದೆ ಮೂರು ದಿನದೊಳಗೆ ಉತ್ತರ ನೀಡುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.