Advertisement

ಚುರುಕುಗೊಂಡ ವಿದ್ಯುತ್‌ ದುರಸ್ತಿ ಕಾರ್ಯ

10:33 AM Aug 31, 2019 | Suhan S |

ಬಾಗಲಕೋಟೆ: ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಿಂದ ಒಟ್ಟು 195 ಗ್ರಾಮಗಳು ತುತ್ತಾಗಿದ್ದು, ಈ ಗ್ರಾಮಗಳ ಪ್ರದೇಶಗಳಲ್ಲಿ ಹಾನಿಗೊಳಗಾಗಿರುವ ವಿದ್ಯುತ್‌ ಕಂಬ, ವಿದ್ಯುತ್‌ ಪರಿವರ್ತಕಗಳ ದುರಸ್ತಿ ಕಾರ್ಯಕ್ಕೆ ಬೆಸ್ಕಾಂ ಕಚೇರಿಯಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ಬಾಗಲಕೋಟೆಗೆ ನಿಯೋಜಿಸಲಾಗಿದೆ ಎಂದು ಹೆಸ್ಕಾಂ ಅಧೀಕ್ಷಕ ಅಭಿಯಂತರ ಕಾಶಿನಾಥ ಹಿರೇಮಠ ತಿಳಿಸಿದ್ದಾರೆ.

Advertisement

ಜಿಲ್ಲೆಯಲ್ಲಾದ ಪ್ರವಾಹದಿಂದ ವಿದ್ಯುತ್‌ ಕಂಬಗಳು ಸಾಕಷ್ಟು ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ ತುರ್ತಾಗಿ ದುರಸ್ತಿ ಕಾರ್ಯ ಕೈಗೊಳ್ಳುವ ನಿಟ್ಟಿನಲ್ಲಿ ಬೆಸ್ಕಾಂನಿಂದ 50 ಸಿಬ್ಬಂದಿಗಳನ್ನೊಳಗೊಂಡ ಒಂದು ತಂಡವನ್ನು ಬಾಗಲಕೋಟೆ ಜಿಲ್ಲೆಗೆ ಕಳುಹಿಸಲಾಗಿದೆ. ಕಳುಹಿಸಲಾದ ತಂಡದ ಸಿಬ್ಬಂದಿಗಳನ್ನು ಬಾಗಲಕೋಟೆಗೆ 20, ಜಮಖಂಡಿಗೆ 20 ಹಾಗೂ ಮುಧೋಳ ಪ್ರದೇಶಗಳಿಗೆ 10 ಸಿಬ್ಬಂದಿಗಳನ್ನು ದುರಸ್ತಿ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದರು.

ಬೆಸ್ಕಾಂ ತಂಡದಿಂದ ದುರಸ್ತಿ ಕಾರ್ಯ ಚುರುಕೊಂಡಿದ್ದು, ಹುನಗುಂದ ತಾಲೂಕಿನ ಹುನಗುಂದ ಕೂಡಲಸಂಗಮ, ಅಮೀನಗಡ ಹಾಗೂ ಕಮತಗಿ ಹಾಗೂ ಬಾದಾಮಿ ತಾಲೂಕಿನ ನಂದಿಕೇಶ್ವರ, ಬೆಲೂರ ಹಾಗೂ ಕುಳಗೇರಿ ಪ್ರದೇಶಗಳ ವಿದ್ಯುತ್‌ ದುರಸ್ತಿ ಕೈಗೊಂಡಿದ್ದಾರೆ. ದುರಸ್ತಿ ತಂಡದಲ್ಲಿ ಮೀಟರ್‌ ತಪಾಸಣಾ ವಿಭಾಗದ ಸಿಬ್ಬಂದಿಗಳು ಇದ್ದು, ಪ್ರವಾಹದಿಂದ ಹಾಳಾದ ಟಿಸಿಗಳನ್ನು ಪರೀಕ್ಷಿಸಿ ಸರಿಯಾಗಿದ್ದಲ್ಲಿ ಪುನಃ ಅದೇ ಟಿಸಿ ಅಳವಡಿಸಲಾಗುತ್ತಿದೆ. ಪೂರ್ತಿ ಹಾಳಾಗಿದ್ದಲ್ಲಿ ಅದನ್ನು ಕಳುಹಿಸಿ ಹೊಸ ಟಿಸಿ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

ನೆಲಕ್ಕೆ ಬಿದ್ದ ಕಂಬ ಪುನಃ ನಿಲ್ಲುಸುವ ಕಾರ್ಯ ಹಾಗೂ ಹೊಸ ಕಂಬ ನೆಡುವ ಕಾರ್ಯ ಮಾಡಲಾಗುತ್ತಿದೆ. ಇದರ ಜೊತೆಗೆ ವಿದ್ಯುತ್‌ ತಂತಿ ಸಹ ಬದಲಾಗಿಸುತ್ತಿದೆ. ಪ್ರವಾಹದಿಂದ 4466 ಕಿ.ಮೀ. ಕಂಡಕ್ಟರ (ವಿದ್ಯುತ್‌ ತಂತಿ) ಹಾಳಾಗಿದ್ದು, ಈಗಾಗಲೇ 37.8 ಕಿ.ಮೀ. ವಿದ್ಯುತ್‌ ತಂತಿ ಅಳವಡಿಸಲಾಗಿದೆ. ಜಮಖಂಡಿ ಭಾಗದಲ್ಲಿ ಕಡಕೋಳ, ಜಂಬಗಿ ಬಿ.ಕೆ ಮತ್ತು ಮುತ್ತೂರ, ಮುಧೋಳ ಭಾಗದಲ್ಲಿ ಗುಳಬಾಳ ಜಂಬಗಿಯಲ್ಲಿ ದುರಸ್ತಿ ಕಾರ್ಯ ಮಾಡಲಾಗಿದೆ ಎಂದರು.

ಪ್ರವಾಹಕ್ಕೆ ಒಟ್ಟು 29,766 ಐಪಿ ಸೆಟ್ (ನೀರಾವರಿ ಪಂಪ್‌ಸೆಟ್)ಗಳು ಹಾಳಾಗಿದ್ದು, ಈ ಪೈಕಿ 4,870 ರಿಪ್ಲೇಸ್‌ ಮಾಡಲಾಗಿದೆ. ಜಿಲ್ಲೆಯಲ್ಲಿ ವಿದ್ಯುತ್‌ ದುರಸ್ತಿ ಕಾರ್ಯ ಯುದ್ಧೋಪಾದಿಯಲ್ಲಿ ನಡೆದಿದ್ದು, ಬಾಗಲಕೋಟೆಯ ಹೆಸ್ಕಾಂ ಸಿಬ್ಬಂದಿ ಜೊತೆಗೆ ಕಾಂಟ್ರಾಕ್ಟರ್‌ಗಳ ವತಿಯಿಂದ ಸಿಬ್ಬಂದಿ ಪಡೆದು ಕೆಲವೊಂದು ಪ್ರದೇಶಗಳಲ್ಲಿ ಹೆಸ್ಕಾಂದಿಂದ ಸಲಕರಣ ಕೊಟ್ಟು ದುರಸ್ತಿ ಕಾರ್ಯ ಮಾಡಿಸಲಾಗುತ್ತಿದೆ ಎಂದು ಕಾಶಿನಾಥ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next