Advertisement

ಚುರುಕುಗೊಂಡ ಮುಂಗಾರು: ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ

01:28 AM Jul 04, 2020 | Sriram |

ಬಂಟ್ವಾಳ: ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಪರಿಣಾಮ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ಶುಕ್ರವಾರ ಬಂಟ್ವಾಳ ವ್ಯಾಪ್ತಿಯಲ್ಲಿ ನೀರಿನ ಮಟ್ಟ 3.6 ಮೀ.ನಷ್ಟಿತ್ತು.

Advertisement

ಘಟ್ಟ ಪ್ರದೇಶದಲ್ಲಿ ಮಳೆಯಾದಾಗ ನೇತ್ರಾವತಿ, ಕುಮಾರಧಾರಾ ನದಿಗಳು ಹಾಗೂ ಅದರ ಉಪನದಿಗಳಲ್ಲಿ ನೀರು ಹೆಚ್ಚಾಗುತ್ತದೆ. ಉಪ್ಪಿನಂಗಡಿ ಸಂಗಮದಿಂದ ಎರಡೂ ನದಿಗಳು ಒಂದಾಗಿ ಹರಿಯುತ್ತವೆೆ. ನೀರಿನ ಹರಿವು ಹೆಚ್ಚಳವಾಗುತ್ತಿದ್ದಂತೆ ತುಂಬೆ ಡ್ಯಾಂನಲ್ಲಿ ಗೇಟ್‌ಗಳನ್ನು ತೆರೆಯಲಾಗುತ್ತಿದೆ. ಪ್ರಸ್ತುತ 30ರ ಪೈಕಿ 11 ಗೇಟ್‌ಗಳನ್ನು ತೆರೆಯಲಾಗಿದೆ. ಮಳೆಗಾಲದಲ್ಲಿ ಬಂಟ್ವಾಳ ತಾಲೂಕು ಆಡಳಿತವು ಗೂಡಿನಬಳಿ ಸಮೀಪದಲ್ಲಿರುವ ಅಳತೆ ಮಾಪನದ ಮೂಲಕ ನೀರಿನ ಮಟ್ಟ ಪರೀಕ್ಷಿಸುತ್ತಿದ್ದು, ಜೂನ್‌ ಆರಂಭದಲ್ಲಿ 4 ಮೀ. ಗಳಿಗಿಂತಲೂ ಹೆಚ್ಚಿತ್ತು. ಆಗ ತುಂಬೆ ಡ್ಯಾಂನ ಹೆಚ್ಚಿನ ಗೇಟ್‌ ತೆರೆದಿರಲಿಲ್ಲ.

ಬಳಿಕ ನೀರು ಅಳತೆ ಮಾಪನಕ್ಕಿಂತಲೂ (1 ಮೀ.ಗೂ ಕಡಿಮೆ) ಕೆಳಗಿತ್ತು. ಪ್ರಸ್ತುತ ಹೆಚ್ಚಿನ ಗೇಟ್‌ ತೆರೆದು ನೀರನ್ನು ಹೊರ ಬಿಡಲಾಗುತ್ತಿದೆ. ಬಂಟ್ವಾಳದ ಮೇಲ್ಭಾಗ ದಲ್ಲಿರುವ ಶಂಭೂರು ಎಎಂಆರ್‌ ಅಣೆಕಟ್ಟಿ ನಲ್ಲೂ ವಿದ್ಯುತ್‌ ಉತ್ಪಾ ದನೆ ನಡೆಯುತ್ತಿದ್ದು, ನೀರು ಹೊರ ಹರಿಯುತ್ತಿದೆ.

ಆತಂಕವಿಲ್ಲ
ಬಂಟ್ವಾಳದಲ್ಲಿ ನೀರಿನ ಅಪಾಯದ ಮಟ್ಟ 8.5 ಮೀ. ಪ್ರಸ್ತುತ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದರೂ ಆತಂಕವಿಲ್ಲ. ಮಳೆಯ ತೀವ್ರತೆ ಹೆಚ್ಚಾದರೆ ನೀರು ಏರುವ ಸಾಧ್ಯತೆ ಇದೆ.

ಉಭಯ ತಾಲೂಕುಗಳಲ್ಲಿ ಉತ್ತಮ ಮಳೆ
ಪುತ್ತೂರು/ಸುಳ್ಯ: ಎರಡು ದಿನಗಳಿಂದ ಪುತ್ತೂರು, ಸುಳ್ಯ ತಾಲೂಕಿಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಶುಕ್ರವಾರವೂ ದಿನವಿಡೀ ಮಳೆ ಸುರಿದಿದೆ. ಪರಿಣಾಮ ನದಿ, ಹೊಳೆ, ತೋಡಿನಲ್ಲಿ ನೀರಿನ ಹರಿವು ಪ್ರಮಾಣ ಹೆಚ್ಚಳಗೊಂಡಿದೆ.

Advertisement

ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಚರಂಡಿ ವ್ಯವಸ್ಥೆಗಳು ಅಸಮರ್ಪಕತೆಯಿಂದ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ನರಿಮೊಗರು ಸಹಿತ ಹಲವೆಡೆ ರಸ್ತೆಯಲ್ಲೇ ಮಳೆ ನೀರು ಹರಿದು ಸವಾರರ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.

ಬಂಟ್ವಾಳ: ಉತ್ತಮ ಮಳೆ
ತಾಲೂಕಿನಾದ್ಯಂತ ಶುಕ್ರವಾರವೂ ಉತ್ತಮ ಮಳೆಯಾಗಿದೆ. ಬೆಳಗ್ಗಿನ ಹೊತ್ತು ಮಳೆಯ ತೀವ್ರತೆ ಕಡಿಮೆ ಇದ್ದು, ಮಧ್ಯಾಹ್ನದ ಬಳಿಕ ಹೆಚ್ಚಾಗಿತ್ತು. ಬೆಳ್ತಂಗಡಿ ಯಲ್ಲಿ ಸಾಧಾರಣ ಮಳೆಯಾಗಿದೆ.

ಕೋಡಿಂಬಾಳ: ಅಯ್ಯಪ್ಪ ಮಂದಿರದ ತಡೆಗೋಡೆ ಕುಸಿತ
ಕಡಬ: ಕೋಡಿಂಬಾಳದ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ತಡೆ ಗೋಡೆಯು ಮಳೆಯ ಕಾರಣ ದಿಂದಾಗಿ ಕುಸಿದಿದ್ದು, ಸುಳ್ಯ ಶಾಸಕ ಎಸ್‌. ಅಂಗಾರ ಅವರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸುಮಾರು 5 ಲ.ರೂ. ನಷ್ಟ ಸಂಭವಿಸಿದ್ದು ಮಂದಿರದ ಎದುರು ಶಾಶ್ವತ ತಡೆಗೋಡೆ ನಿರ್ಮಿಸಲು ಅನುದಾನ ಒದಗಿಸುವಂತೆ ಮಂದಿರದ ಆಡಳಿತ ಸಮಿತಿಯ ಪದಾಧಿಕಾರಿಗಳು ಶಾಸಕರಿಗೆ ಮನವಿ ಮಾಡಿದರು.

ಅನುದಾನದ ಲಭ್ಯತೆ ನೋಡಿ ಕೊಂಡು ಆದ್ಯತೆ ಮೇರೆಗೆ ಅನುದಾನ ಒದಗಿಸಲು ಪ್ರಯತ್ನಿಸುವುದಾಗಿ ಶಾಸಕರು ಭರವಸೆ ನೀಡಿದರು. ಮಂದಿರದ ಆಡಳಿತ ಸಮಿತಿಯ ಪದಾಧಿಕಾರಿಗಳಾದ ಕೇಶವ ಗೌಡ ಬೇರಿಕೆ, ಬಾಲಕೃಷ್ಣ ಗೌಡ ಗುಂಡಿಮಜಲು, ಗಣೇಶ್‌ ಕೋಲ್ಪೆ, ಸುರೇಶ್‌ ಕೋಡಿಂಬಾಳ, ರಘುರಾಮ ನಾೖಕ್‌ ಕುಕ್ಕೆರೆಬೆಟ್ಟು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next