Advertisement

ಚುರುಕುಗೊಂಡ ಮಹಾಲಿಂಗಪುರ ತಾಲೂಕು ಹೋರಾಟ

09:26 AM Jun 23, 2019 | Suhan S |

ಮಹಾಲಿಂಗಪುರ: ಪಟ್ಟಣವನ್ನು ತಾಲೂಕಾ ಕೇಂದ್ರವನ್ನಾಗಿ ಘೋಷಿಸಲು ಆಗ್ರಹಿಸಿ ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರಿಗೆ ಮನವಿ ಸಲ್ಲಿಸಲು ತಾಲೂಕಾ ಹೋರಾಟ ಸಮಿತಿ ನಿಯೋಗ ಜೂ. 24ರಂದು ಬೆಂಗಳೂರಿಗೆ ತೆರಳಲಿದೆ ಎಂದು ಮಹಾಲಿಂಗಪುರ ತಾಲೂಕಾ ಹೋರಾಟ ಸಮಿತಿ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ ಹೇಳಿದರು.

Advertisement

ಎಪಿಎಂಸಿ ವರ್ತಕರ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಪೂರ್ವದಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ಕಂದಾಯ ಸಚಿವರಿಗೆ ನಿಯೋಗವು ಭೇಟಿಯಾಗಿ ಮಹಾಲಿಂಗಪುರವನ್ನು ತೇರದಾಳ ತಾಲೂಕಿನಲ್ಲಿ ಸೇರಿಸಿದ್ದಕ್ಕೆ ನಮ್ಮ ವಿರೋಧವಿದೆ. ಜಮಖಂಡಿ ತಾಲೂಕಿನಲ್ಲಿ ರಬಕವಿ-ಬನಹಟ್ಟಿ, ತೇರದಾಳ ತಾಲೂಕನ್ನಾಗಿ ಘೋಷಿಸಿರುವುದರಿಂದ ಅದೇ ಮಾದರಿಯಲ್ಲಿ ಮುಧೋಳ ತಾಲೂಕಿನ ಹಲವು ಹಳ್ಳಿಗಳನ್ನು ಸೇರಿಸಿ ಮಹಾಲಿಂಗಪುರವನ್ನು ತಾಲೂಕಾಗಿ ಘೋಷಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದ್ದೇವೆ ಎಂದರು.

ಈಗ ಮತ್ತೆ ನಿಯೋಗದೊಂದಿಗೆ ತೆರಳಿ ಸಿಎಂ ಮತ್ತು ಸಂಬಂಧಿಸಿದ ಇಲಾಖೆಗಳ ಸಚಿವರಿಗೆ ಮನವಿ ಸಲ್ಲಿಸಿ ಮಹಾಲಿಂಗಪುರ ತಾಲೂಕಾ ಕೇಂದ್ರವಾಗುವರೆಗೂ ಪಕ್ಷಾತೀತ ಹೋರಾಟಕ್ಕೆ ನಿರ್ಧರಿಸಲಾಗಿದೆ ಎಂದರು.

ವಿವಿಧ ಪಕ್ಷಗಳ ಮುಖಂಡರಾದ ಎಸ್‌.ಎಂ.ಉಳ್ಳೇಗಡ್ಡಿ, ಚನಬಸು ಹುರಕಡ್ಲಿ, ಧರೆಪ್ಪ ಸಾಂಗಲಿಕರ, ಸೈದಾಪುರ ಗ್ರಾಪಂ ಅಧ್ಯಕ್ಷ ಮಹಾಲಿಂಗಪ್ಪ ಸನದಿ, ಸಿದ್ದು ಶಿರೋಳ, ಜಯರಾಮಶೆಟ್ಟಿ ಮಾತನಾಡಿ, ಮಹಾಲಿಂಗಪುರವನ್ನು ತೇರದಾಳ ತಾಲೂಕಿನಲ್ಲಿ ಸೇರಿಸಿದ್ದರಿಂದಾಗಿ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಮುಧೋಳ, ರಬಕವಿ-ಬನಹಟ್ಟಿ, ತೇರದಾಳ ಮೂರು ತಾಲೂಕಿಗೆ ಅಲೆದಾಡುವಂತಾಗಿದೆ. ಪಟ್ಟಣವನ್ನು ತಾಲೂಕಾ ಕೇಂದ್ರವನ್ನಾಗಿಸಲು 26 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಸಹ ಒಗ್ಗಟ್ಟು ಮತ್ತು ಇಚ್ಛಾಶಕ್ತಿಯ ಕೊರತೆಯಿಂದ ಹಿನ್ನಡೆಯಾಗಿದೆ. ಈ ಬಾರಿ ಮಾತ್ರ ತಾಲೂಕಾ ಕೇಂದ್ರ ಆಗುವರೆಗೂ ಹೋರಾಟ ನಿರಂತರವಾಗಿ ಮತ್ತು ಪಕ್ಷಾತೀತವಾಗಿ ಮಾಡೋಣ. ಇದಕ್ಕೆ ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ 9 ಗ್ರಾಮಗಳ ಜನರು ಒಗ್ಗಟ್ಟಾಗಿ ಹೋರಾಟಕ್ಕೆ ಸಹಕಾರ ನೀಡಬೇಕು ಎಂದರು.

ಬಿಜೆಪಿ ಗ್ರಾಮೀಣ ಘಟಕದ ಅದ್ಯಕ್ಷ ಬಸನಗೌಡ ಪಾಟೀಲ, ಜೆಡಿಎಸ್‌ ತೇರದಾಳ ಮತಕ್ಷೇತ್ರದ ಅಧ್ಯಕ್ಷ ನಿಂಗಪ್ಪ ಬಾಳಿಕಾಯಿ, ಲಯನ್ಸ ಕ್ಲಬ್‌ ಅಧ್ಯಕ್ಷ ಗೋವಿಂದಪ್ಪ ನಿಂಗಸಾನಿ, ದಲಾಲ ವರ್ತಕರಾದ ಚಂದ್ರು ಗೊಂದಿ, ಮಹಾಲಿಂಗಪ್ಪ ನುಚ್ಚಿ, ಗುರುಲಿಂಗಪ್ಪ ಹುಬ್ಬಳ್ಳಿ, ವಿನೋದ ಚಮಕೇರಿ, ವಿಜಯ ಬಾಡನವರ, ಪುರಸಭೆ ಮಾಜಿ ಅಧ್ಯಕ್ಷ ಪ್ರಕಾಶ ಅರಳಿಕಟ್ಟಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next