Advertisement

ಜಿಟಿಡಿ ಪುತ್ರನ ವಿರುದ್ಧ ಎಸಿಬಿ ತನಿಖಾಸ್ತ್ರ

08:24 AM Dec 20, 2017 | Team Udayavani |

ಬೆಂಗಳೂರು: ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್‌ನಿಂದ ಸ್ಪರ್ಧೆ ಮಾಡಲಿರುವ ಹಾಲಿ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರ ಪುತ್ರ ಜಿಪಂ ಸದಸ್ಯ ಜಿ.ಡಿ.ಹರೀಶ್‌ಗೌಡ ವಿರುದ್ಧ ಭೂ ಸ್ವಾಧೀನ ಹಗರಣ “ಅಸ್ತ್ರ’ ಬಳಸಿದ್ದು, ಲೋಕಾಯುಕ್ತದಲ್ಲಿದ್ದ ಪ್ರಕರಣವನ್ನು ಎಸಿಬಿ ತನಿಖೆಗೆ ವರ್ಗಾಯಿಸಲಾಗಿದೆ.

Advertisement

2008 ಮತ್ತು 2009ರಲ್ಲಿ ಗೃಹ ಮಂಡಳಿ ಯೋಜನೆಗೆ ಭೂ ಸ್ವಾಧೀನ ಪ್ರಸ್ತಾಪವಾದಾಗ ಮಧ್ಯವರ್ತಿಗಳು ಎಕರೆಗೆ 8 ರಿಂದ 18 ಲಕ್ಷ ರೂ. ನೀಡಿ ರೈತರಿಂದ ಜಮೀನು ಖರೀದಿ ಒಡಂಬಡಿಕೆ (ಜಿಪಿಎ) ಮಾಡಿಕೊಂಡಿದ್ದರು. ಆದರೆ, ಬಳಿಕ ಭೂ ಸ್ವಾಧೀನ ವಾದಾಗ ಒಂದು ಎಕರೆ 36.50 ಲಕ್ಷ ರೂ.ಗೆ ಗೃಹ ಮಂಡಳಿಗೆ ನೀಡಿದ್ದರು. ಇದರಿಂದ ರೈತರಿಗೆ ಅನ್ಯಾಯವಾಗಿದೆ, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ದೊಡ್ಡ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಆಗ ಗೃಹ ಮಂಡಳಿ ಅಧ್ಯಕ್ಷರಾಗಿ ಜಿ.ಟಿ.ದೇವೇಗೌಡರ ವಿರುದ್ಧವೂ 81 ಎಕರೆ ಭೂಮಿ ಖರೀದಿಯಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪವಿತ್ತು. ಈ ಬಗ್ಗೆ 46 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಎಫ್ಐಆರ್‌ನಲ್ಲಿ ದೇವೇಗೌಡರ ಹೆಸರಿಲ್ಲವಾದರೂ ಅವರ ಪುತ್ರ, ಹರೀಶ್‌ಗೌಡ 44ನೇ ಆರೋಪಿ. ಸರ್ಕಾರದ ಮಟ್ಟದಲ್ಲಿ ತನಿಖೆ ನಡೆಸಿ ವರದಿ ನೀಡಲಾಗಿತ್ತು. ನಂತರ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಲಾಗಿತ್ತು. ಇದೀಗ ಲೋಕಾಯುಕ್ತದಿಂದ ಎಸಿಬಿಗೆ ವರ್ಗಾವಣೆ ಮಾಡಲಾಗಿದೆ.

ಎಚ್‌ಡಿಕೆ ಸವಾಲು: ಈ ಮಧ್ಯೆ, ಪ್ರಕರಣವನ್ನು ಎಸಿಬಿ ತನಿಖೆಗೆ ನೀಡಿರುವುದನ್ನು ರಾಜಕೀಯ ಸೇಡಿನ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆ ಎದುರಿಸಲು ಭಯ ಬಿದ್ದಿರುವ ಸಿಎಂ ಸಿದ್ದರಾಮಯ್ಯ, ಜಿ.ಟಿ. ದೇವೇಗೌಡರ ಪುತ್ರನ ವಿರುದ್ಧ ಎಸಿಬಿಯಲ್ಲಿ ಎಫ್ಐಆರ್‌ ಹಾಕಿಸಿ ಬೆದರಿಸಲು ಮುಂದಾಗಿದ್ದಾರೆ ಎಂದು ಟೀಕಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಕುಮಾರಪರ್ವ ಯಾತ್ರೆಯಲ್ಲಿ ಸೇರಿದ ಜನಸ್ತೋಮ ಕಂಡು ಬೆಚ್ಚಿಬಿದ್ದ ಸಿದ್ದರಾಮಯ್ಯ ಎದುರಾಳಿಯನ್ನು ಮಣಿಸಲು ವಾಮಮಾರ್ಗ ಹುಡುಕಿದ್ದಾರೆ. ಇದನ್ನೆಲ್ಲಾ ಬಿಟ್ಟು ತಾಕತ್ತಿದ್ದರೆ ಚುನಾವಣೆಯಲ್ಲಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು. ನ್ಯಾಯಯುತ ತನಿಖೆಗೆ ನಮ್ಮ ತಕರಾರಿಲ್ಲ. ಆದರೆ, ರಾಜಕೀಯವಾಗಿ ಹಣಿಯುವ ಉದ್ದೇಶದಿಂದ ಸಿದ್ದರಾಮಯ್ಯ, ಪಾರ್ಟ್‌ ಟೈಂ
ಸಲಹೆಗಾರ ಕೆಂಪಯ್ಯ ಮಾತು ಕೇಳಿ ಜಿ.ಟಿ.ದೇವೇಗೌಡರ ವಿರುದ್ಧ ಕ್ರಮ ಕೈಗೊಂಡರೆ ನಾಲ್ಕೇ ತಿಂಗಳಲ್ಲಿ ಪಶ್ಚಾತ್ತಾಪ
ಪಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. 

ಇಲವಾಲ ಭೂ ಸ್ವಾಧೀನ ಪ್ರಕರಣವನ್ನು ಮತ್ತೆ ಕೆದಕಲಾಗಿದೆ. 2011ರಲ್ಲೇ ಅಂದಿನ ಮುಖ್ಯ ಕಾರ್ಯದರ್ಶಿ ಎಸ್‌.ವಿ.ರಂಗನಾಥ್‌, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಜ್ಯೋತಿರಾಮಲಿಂಗಂ ಅವರು ಪ್ರಕರಣದಲ್ಲಿ ಅಕ್ರಮ ಆಗಿಲ್ಲ. ರೈತರಿಗೆ ನ್ಯಾಯಯುತ ಪರಿಹಾರ ಸಿಕ್ಕಿದೆ ಎಂದು ವರದಿ ಕೊಟ್ಟಿದ್ದಾರೆ. ಇಷ್ಟಾದರೂ 2014ರಲ್ಲಿ ಪ್ರಕರಣ ಲೋಕಾಯುಕ್ತಕ್ಕೆ ವಹಿಸಲಾಗಿತ್ತು.
ಲೋಕಾಯುಕ್ತದಲ್ಲಿ 3 ವರ್ಷ ಏನೂ ಕ್ರಮ ಕೈಗೊಳ್ಳದೆ ಇಟ್ಟುಕೊಂಡು ಇದೀಗ ಎಸಿಬಿ ತನಿಖೆಗೆ ಒಪ್ಪಿಸಿ ಸೋಮವಾರ ಎಫ್ಐಆರ್‌ ಹಾಕಲಾಗಿದೆ. ಇದು ರಾಜಕೀಯ ಪ್ರತೀಕಾರವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.

ಕನಕಪುರದಲ್ಲಿ ಡೇರಿ ಘಟಕಕ್ಕಾಗಿ ರೈತರಿಂದ 5 ರಿಂದ 10 ಲಕ್ಷ ರೂ.ಗೆ ಜಿಪಿಎ ಮಾಡಿಸಿಕೊಂಡ ಜಮೀನಿಗೆ ಸರ್ಕಾರಿ ಮಾರ್ಗಸೂಚಿ ದರ 16 ಲಕ್ಷ ರೂ. ಇದ್ದರೂ ಎಕರೆಗೆ 55 ಲಕ್ಷ  ರೂ. ದರ ನಿಗದಿ ಮಾಡಿಕೊಂಡ ಕಾಂಗ್ರೆಸ್‌ ಪುಡಾರಿಗಳ ವಿರುದ್ಧ ಯಾಕೆ ತನಿಖೆ ನಡೆಸುತ್ತಿಲ್ಲ? ರಾಮನಗರದಲ್ಲಿ ಆಶ್ರಯ ಯೋಜನೆಗಾಗಿ 65 ಎಕರೆ ಜಮೀನಿಗೆ 15 ಲಕ್ಷ ರೂ. ನೀಡಿ ರೈತರಿಂದ ಪಡೆದು ಎಕರೆಗೆ 60 ಲಕ್ಷ ರೂ.ದರ ನಿಗದಿ ಮಾಡಿಸಿಕೊಂಡು 20 ಕೋಟಿ ರೂ. ದೋಚಲು ಹೊರಟಿರುವವರ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತೀರಿ. 
ಶಾಸಕನಾದ ನನ್ನ ಗಮನಕ್ಕೂ ತಾರದೆ ಸಭೆ ನಡೆಸುತ್ತಿರುವುದು ಪಾಳೆಗಾರಿಕೆಯಾ ಎಂದು ಪ್ರಶ್ನಿಸಿದರು.

Advertisement

ಜಂತಕಲ್‌ ಪ್ರಕರಣದಲ್ಲಿ ವಾರಕ್ಕೊಮ್ಮೆ ಹೋಗಿ ನಾನು ಸಹಿ ಮಾಡಿ ಬರಬೇಕಿದೆ. ನಾನೇನಾದರೂ ಕೊಲೆ ಆರೋಪಿಯಾ?
ನನ್ನನ್ನು ಜೈಲಿಗೆ ಕಳುಹಿಸುವ ಷಡ್ಯಂತ್ರ ಮಾಡಲಾಗಿದೆ. ಆಯ್ತು ನೋಡೇ ಬಿಡ್ತೇನೆ, ಜೈಲಿಗೆ ಕಳುಹಿಸಲಿ ಅಲ್ಲಿಂದಲೇ ಚುನಾವಣೆ ನಡೆಸಿ ಅಧಿಕಾರಕ್ಕೆ ಬರುತ್ತೇನೆ ಎಂದು ಹೇಳಿದರು. 

ಜಿ.ಟಿ.ದೇವೇಗೌಡರಿಗೆ “ಕಾಂಗ್ರೆಸ್‌ಗೆ ಬರಬೇಕು, ಇಲ್ಲದಿದ್ದರೆ ಜೈಲಿಗೆ ಕಳುಹಿಸುತ್ತೇವೆ’ ಎಂದು ಬೆದರಿಸಲಾಗಿದೆ. ಕಾಂಗ್ರೆಸ್‌ಗೆ ಬಂದರೆ ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡುತ್ತೇವೆ. ಸಿದ್ದರಾಮಯ್ಯ ವಿ3ರುದ್ಧ ಸ್ಪರ್ಧೆ ಮಾಡಿದರೆ ಗೃಹ ಮಂಡಳಿ ಪ್ರಕರಣ ತನಿಖೆಗೆ ಒಪ್ಪಿಸುತ್ತೇವೆ ಎಂದು ಹೆದರಿಸಲಾಗಿದೆ. ಇಂತಹ ಕೆಟ್ಟ ರಾಜಕಾರಣ ಮಾಡುವ ದುಸ್ಥಿತಿ ಸಿದ್ದರಾಮಯ್ಯ ಅವರಿಗೆ ಬರಬಾರದಿತ್ತು. ವರುಣಾ ಹಾಗೂ ಚಾಮುಂಡೇಶ್ವರಿಯಲ್ಲಿ ಅಪ್ಪ-ಮಕ್ಕಳು ತಿಪ್ಪರಲಾಗ ಹಾಕಿದರೂ ಗೆಲ್ಲುವುದಿಲ್ಲ.
 ●ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಜಿ.ಟಿ. ದೇವೇಗೌಡ ಅವರು ಕೆಎಚ್‌ಬಿ ಬಡಾವಣೆಯ ಭೂ ಸ್ವಾಧೀನದಲ್ಲಿ ಅಕ್ರಮವಾಗಿ ಭೂ ಸ್ವಾಧೀನ ನಡೆಸಿದ್ದಾರೆ ಎಂಬ ಆರೋಪಕ್ಕೆ ಲೋಕಾಯುಕ್ತರು ತನಿಖೆ ನಡೆಸಿದ್ದರು. ಅವರು ವರದಿ ಕೊಟ್ಟ ಮೇಲೆ ಎಸಿಬಿಗೆ ಪ್ರಕರಣ ಹಸ್ತಾಂತರಿಸಲಾಗಿದೆ. ಇದರಲ್ಲಿ ಯಾವುದೇ
ರಾಜಕೀಯ ಇಲ್ಲ.
 ●ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next