Advertisement

9 ಸರಕಾರಿ ಅಧಿಕಾರಿಗಳಿಗೆ ಎಸಿಬಿ ಬಲೆ

07:30 AM Mar 10, 2018 | |

ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ರಾಜ್ಯದ ವಿವಿಧ ಜಿಲ್ಲೆಯ 9 ಮಂದಿ ಸರಕಾರಿ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿ ಶಾಕ್‌ ನೀಡಿದೆ. ಆರೋಪಿಗಳಿಗೆ ಸೇರಿದ 36 ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿ  ಆದಾಯ ಮೀರಿದ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಬೆಂಗಳೂರು, ಬೆಳಗಾವಿ, ಉಡುಪಿ, ಗಂಗಾವತಿ, ಕೋಲಾರ, ರಾಮನಗರ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿಗೆ ಸಂಬಂಧಿಸಿದ ಕಡತಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ.

Advertisement

ಬೆಂಗಳೂರಿನ ಬಸವನಗುಡಿ ಚಿಕ್ಕಪೇಟೆ ವಿಭಾಗದ ಘನ ತ್ಯಾಜ್ಯ ನಿರ್ವಹಣೆ ಘಟಕದ ಎಇಇ ಆರ್‌. ಗಂಗಾಧರ್‌ ಹೆಸರಿನಲ್ಲಿರುವ ನಂದಿನಿ ಲೇಔಟ್‌ನ ಮನೆ, ಕಚೇರಿ ಹಾಗೂ ಕೆಜಿಐಡಿ ಎಸ್‌.ಬಿ. ಅಧೀಕ್ಷಕ ರುದ್ರಪ್ರಸಾದ್‌ಗೆ ಸೇರಿದ ಮಲ್ಲತ್ತಹಳ್ಳಿ, ಬನಶಂಕರಿ, ತುಮಕೂರಿನಲ್ಲಿರುವ ಮನೆಗಳು ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ರಾಮನಗರ ಮಾಗಡಿ ತಾಲೂಕಿನ ಬಣವಾಡಿ ವೈದ್ಯಕೀಯ ಅಧಿಕಾರಿ ಡಾ| ರಘುನಾಥ್‌ಗೆ ಸೇರಿದ ಕುದೂರಿನ ಮನೆ, ಖಾಸಗಿ ಕ್ಲಿನಿಕ್‌ ಮತ್ತು ಬಣವಾಡಿಯ ಸರಕಾರಿ ಪ್ರೈಮರಿ ಮೆಡಿಕಲ್‌ ಸೆಂಟರ್‌ನಲ್ಲಿ ಶೋಧ ಕಾರ್ಯ ನಡೆದಿದೆ.

ಬೆಳಗಾವಿ ಅಥಣಿಯ ಹಿಪ್ಪರಗಿ ಅಣೆಕಟ್ಟು ಯೋಜನೆ ವಿಶೇಷ ಭೂಸ್ವಾಧೀನ ಅಧಿಕಾರಿ ರಾಜಶ್ರೀ ಜೈನಾಪುರಗೆ ಸೇರಿದ ಬೆಳಗಾವಿಯ 3 ಮನೆಗಳು ಹಾಗೂ ಅಥಣಿಯಲ್ಲಿನ ಕಚೇರಿ, ಕೇಶವಾಪುರ, ಹುಬ್ಬಳ್ಳಿಯಲ್ಲಿರುವ ಮನೆಗಳ ಮೇಲೆ ದಾಳಿ. ಗಂಗಾವತಿ ಗ್ರಾಮೀಣ ಕುಡಿಯುವ ನೀರು ಉಪ ವಿಭಾಗದ ಮತ್ತು (ಪ್ರಭಾರ) ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಪಂಚಾಯತ್‌ ರಾಜ್‌ ಎಂಜಿನಿಯರ್‌ ಪಿ. ವಿಜಯ್‌ಕುಮಾರ್‌ ಗಂಗಾವತಿಯ ಕಚೇರಿ, ಎರಡು ಮನೆಗಳು ಹಾಗೂ ಬೆಂಗಳೂರಿನ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಹಾಗೆಯೇ ಕೋಲಾರ ಶ್ರೀನಿವಾಸಪುರ ತಾಲೂಕಿನ ಗ್ರಾಮೀಣ ನೀರು ಸರಬರಾಜು ಮತ್ತು ಒಳಚರಂಡಿ ಸಹಾಯಕ ಅಭಿಯಂತರ ಎನ್‌. ಅಪ್ಪಿ ರೆಡ್ಡಿಗೆ ಸೇರಿದ ಶ್ರೀನಿವಾಸಪುರದ ಎರಡು ಮನೆಗಳು, ಫೌಲಿó ಫಾರಂ ಮತ್ತು ವಡೆಗಪಲ್ಲಿಯಲ್ಲಿನ ಮನೆ ಹಾಗೂ ಕಚೇರಿಯನ್ನು ತಂಡ ಪರಿಶೀಲಿಸಿದೆ.

ಉಡುಪಿಯ ಅಬಕಾರಿ ಉಪ ಅಧೀಕ್ಷಕ ವಿನೋದ್‌ ಕುಮಾರ್‌ ಅವರ ಮಂಗಳೂರಿನ ಎರಡು ಮನೆಗಳು, ಅಜ್ಜರಕಾಡು, ಉಡುಪಿಯಲ್ಲಿರುವ ಇವರ ಕಾರು ಚಾಲಕನ ಮನೆ, ಕುಕ್ಕುಂದೂರು ಮತ್ತು ಬಿಜೂರಿನಲ್ಲಿರುವ ಮನೆಗಳು, ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

ಚಿಕ್ಕಮಗಳೂರಿನ ಆರ್‌ಟಿಒ ಕಚೇರಿಯ ಪ್ರಥಮ ದರ್ಜೆ ಸಹಾಯಕ ಕೆ.ಸಿ. ವಿರೂಪಾಕ್ಷಗೆ ಸೇರಿದ ಚಿಕ್ಕಮಗಳೂರಿನ ಮನೆ, ಕಚೇರಿ ಹಾಗೂ ಹೊಳೆನರಸಿಪುರದಲ್ಲಿರುವ ಮನೆ ಮೇಲೆ ಹಾಗೂ ಕಡೂರು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎ.ಪಿ. ಶಿವಕುಮಾರ್‌ಗೆ ಸೇರಿದ ತಿಪಟೂರಿನ ಎರಡು ಮನೆಗಳು, ಕಚೇರಿಯನ್ನು ಶೋಧಿಸಲಾಗಿದೆ.

Advertisement

75 ಲಕ್ಷ ರೂಪಾಯಿ ಮೌಲ್ಯದ ಸೊತ್ತು ವಶ
ಅಬಕಾರಿ ಇಲಾಖೆಯ ಉಡುಪಿ ಉಪ ಅಧೀಕ್ಷಕ ವಿನೋದ್‌ ಕುಮಾರ್‌ ಅವರ ನಿವಾಸ, ಕಚೇರಿ ಸಹಿತ  ಐದು ಕಡೆ ಎಸಿಬಿ ಅಧಿಕಾರಿಗಳು  ಶುಕ್ರವಾರ ಬೆಳಗ್ಗೆ ಏಕಕಾಲದಲ್ಲಿ  ದಾಳಿ ನಡೆಸಿದ್ದು, ಚಿನ್ನಾಭರಣ ಮತ್ತು ನಗದು ಸಹಿತ ಸುಮಾರು 75 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಪತ್ತೆ ಮಾಡಿದ್ದಾರೆ.

31 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 1 ಲಕ್ಷ ರೂ. ಮೌಲ್ಯದ ಬೆಳ್ಳಿಯ ಆಭರಣ, 2 ಲಕ್ಷ ರೂ. ನಗದು, 2 ಕಾರು, 2 ಬೈಕ್‌ ಸಹಿತ ಭೂಮಿಯ ದಾಖಲೆ ಪತ್ರ, ಬ್ಯಾಂಕ್‌ ಖಾತೆಗಳನ್ನು ಪತ್ತೆ ಮಾಡಿ ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಸಂಪತ್ತು ಹೊಂದಿದ್ದಾರೆ ಎಂಬ ಆರೋಪದ ಮೇಲೆ ಈ ದಾಳಿ ನಡೆಸಲಾಗಿತ್ತು. 

ಎಸಿಬಿ ಎಸ್ಪಿ ಶ್ರುತಿ ನೇತೃತ್ವದಲ್ಲಿ ಪಶ್ಚಿಮ ವಲಯ ಎಸಿಬಿ ಅಧಿಕಾರಿಗಳು ಮಂಗಳೂರಿನ ಕುಂಟಿಕಾನದಲ್ಲಿರುವ ವಿನೋದ್‌ ಅವರ ಮನೆ, ಉಡುಪಿಯಲ್ಲಿರುವ ಕಚೇರಿ, ಕಾರು ಚಾಲಕನ ಮನೆ, ಬೈಂದೂರಿನಲ್ಲಿರುವ ಮಾವನ ಮನೆ, ಕಾರ್ಕಳದಲ್ಲಿರುವ ಪತ್ನಿಯ ತಂಗಿಯ ಮನೆ  ಸಹಿತ ಒಟ್ಟು ಐದು ಕಡೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದರು.  

Advertisement

Udayavani is now on Telegram. Click here to join our channel and stay updated with the latest news.

Next