ಸುಳ್ಯ/ಬೆಳ್ಳಾರೆ: ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸೋಮವಾರ ಸಂಜೆ ಸುಳ್ಯ ನಗರದಲ್ಲಿ ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಕಂದಾಯ ಅಧಿಕಾರಿಯೋರ್ವರನ್ನು ಬಂಧಿಸಿದೆ.
ಸುಳ್ಯ ತಾಲೂಕಿನ ಪಂಜ ಹೋಬಳಿಯ ಕಂದಾಯ ನಿರೀಕ್ಷಕರಾಗಿರುವ ಸುಳ್ಯ ಜಟ್ಟಿಪಳ್ಳ ನಿವಾಸಿ ದಯಾನಂದ ಡಿ.ಟಿ. ಬಂಧಿತರು.
ಮುರುಳ್ಯ ಗ್ರಾಮದ ಹರೀಶ್ ಅವರು 94ಸಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ಅಧಿಕಾರಿ ಲಂಚದ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಹರೀಶ್ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.
ರವಿವಾರ ಸಂಜೆ ಸುಳ್ಯದ ಸಂತೃಪ್ತಿ ಹೊಟೇಲ್ ಬಳಿ ಲಂಚ ಪಡೆಯುತ್ತಿದ್ದ ವೇಳೆ ದಿಢೀರ್ ಕಾರಿನಲ್ಲಿ ಆಗಮಿಸಿದ್ದ ತಂಡ ರೆಡ್ ಹ್ಯಾಂಡಾಗಿ ಸೆರೆ ಹಿಡಿದಿದೆ. ದಾಳಿ ಸಂದರ್ಭ ಲಂಚದ ಮೊತ್ತ 8 ಸಾವಿರ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಮಂಗಳೂರು ಭ್ರಷ್ಟಾಚಾರ ನಿಗ್ರಹ ದಳದ ಎಸ್.ಪಿ. ಶೃತಿ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು. ಡಿವೈಎಸ್‌ಪಿ ಸುಧೀರ್ ಹೆಗ್ಡೆ ಮತ್ತು ಇನ್ಸ್‌ಪೆಕ್ಟರ್ ಯೋಗೀಶ್ ಕುಮಾರ್ ನೇತೃತ್ವದಲ್ಲಿ ಹೆಡ್‌ಕಾನ್‌ಸ್ಟೆàಬಲ್ ಹರಿಪ್ರಸಾದ್ ಸಿಬಂದಿಗಳಾದ ಉಮೇಶ್, ರಾಧಾಕೃಷ್ಣ ಕೆ., ಪ್ರಶಾಂತ್, ಮಹಿಳಾ ಸಿಬಂದಿ ವೈಶಾಲಿ, ಚಾಲಕರಾದ ರಾಕೇಶ್, ಗಣೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಬಂಧಿತ ಅಧಿಕಾರಿ ಸುಳ್ಯ ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬಳಿಕ ಪುತ್ತೂರು ಉಪವಿಭಾಗಾಧಿಕಾರಿ ಕಚೇರಿಗೆ ವರ್ಗಾವಣೆಗೊಂಡಿದ್ದು ಬಳಿಕ ಪಂಜ ಕಂದಾಯ ನಿರೀಕ್ಷಕರಾಗಿ ನಿಯುಕ್ತಿಗೊಂಡಿದ್ದರು. ಪತ್ನಿ ಕೂಡ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.