ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ವಿವಿಧ ಇಲಾಖೆಗಳ ಮೂವರು ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಕಚೇರಿಗಳ ಮೇಲೆ ಬುಧವಾರ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ಲಕ್ಷಾಂತರ ರೂ.ನಗದು ಹಾಗೂ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಕುಲಸಚಿವ, ಪ್ರೊ.ಕಲ್ಲಪ್ಪ ಎಸ್ ಹೊಸಮನಿ, ಲೋಕೋಪಯೋಗಿ ಇಲಾಖೆ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಎಂಜಿನಿಯರ್ ಉದಯ್ ಡಿ ಛಬ್ಬಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಸಿಸ್ಟೆಂಟ್ ಎಂಜಿನಿಯರ್ ಮಹದೇವಪ್ಪ ದಾಳಿಗೊಳಗಾದ ಅಧಿಕಾರಿಗಳು.
ಮಹದೇವಪ್ಪ ಅವರು ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ಸೇರಿದೆ ಎನ್ನಲಾದ ಬೆಂಗಳೂರಿನ ಯಶವಂತಪುರ ಸಮೀಪವಿರುವ ಸಿದ್ದೇಹಳ್ಳಿ, ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿಪಡೆ, ಚಿತ್ರದುರ್ಗದ ಕಣಿವೇಹಳ್ಳಿ ನಿವಾಸಗಳು ಹಾಗೂ ಅವರ ಕಚೇರಿಯಲ್ಲಿ ಶೋಧ ನಡೆಸಲಾಗಿದೆ.
ಪ್ರೊ. ಕಲ್ಲಪ್ಪ ಎಸ್ ಹೊಸಮನಿ ಅವರಿಗೆ ಸೇರಿದ ಧಾರವಾಡದ ಶ್ರೀನಗರದ ನಿವಾಸ, ಅವರ ಸಂಬಂಧಿಕರಿರುವ ಗುಲಗುಂಜಿಕುಪ್ಪ ನಿವಾಸಗಳಲ್ಲಿ ಶೋಧ ನಡೆಸಲಾಗಿದೆ. ಉದಯ್ ಛಬ್ಬಿ ಅವರಿಗೆ ಸೇರಿದ ದಾಂಡೇಲಿ, ಬೆಳಗಾವಿ ಹಾಗೂ ಅವರ ಎರಡು ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆ ಮಾಡಲಾಗಿದೆ.
ಮೂವರು ಅಧಿಕಾರಿಗಳ ನಿವಾಸಗಳಲ್ಲಿ ನಗದು ಹಾಗೂ ಚಿನ್ನಾಭರಣ ದೊರೆತಿದೆ. ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ