ಬೆಂಗಳೂರು: ಆದಾಯ ಮೀರಿ ಆಸ್ತಿಗಳಿಕೆ ಆರೋಪ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ಶುಕ್ರವಾರ ಬೆಳ್ಳಂಬೆಳಗ್ಗೆ ರಾಜ್ಯದ ಐವರು ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳು ಸೇರಿ ಒಟ್ಟು 17 ಕಡೆ ಏಕ ಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಅಲಿ ಅಸ್ಕರ್ ರಸ್ತೆಯಲ್ಲಿರುವ ಸಹಕಾರ ಸಂಘಗಳ ನಿಬಂಧಕರ ಕಚೇರಿಯ ಹೆಚ್ಚುವರಿ ನಿಬಂಧಕ ಆರ್.ಶ್ರೀಧರ್, ಬಿಬಿಎಂಪಿ ನಗರ ಯೋಜನೆ ಪೂರ್ವ ವಲಯ ಸಹಾಯಕ ನಿರ್ದೇಶಕ ಕೆ.ಬೀಸೆಟಪ್ಪ, ದಾವಣಗೆರೆ ಕೃಷಿ ಇಲಾಖೆ ಉಪ ನಿರ್ದೇಶಕಿ ಹಂಸವೇಣಿ, ಮಂಗಳೂರಿನ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ(ರೀಡರ್)ಡಿ.ಮಂಜುನಾಥ, ಮೈಸೂರಿನ ಮೂಡಾ ಕಿರಿಯ ಅಭಿಯಂತರ ಕೆ.ಮಣಿ ಅವರಿಗೆ ಸೇರಿದ ಮನೆ, ಕಚೇರಿಗಳು ಹಾಗೂ ವಿವಿಧೆಡೆ ಇರುವ ಅವರ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ಹೇಳಿದರು.
ಹೆಚ್ಚುವರಿ ನಿಬಂಧಕ ಆರ್.ಶ್ರೀಧರ್‌ಗೆ ಸೇರಿದ ಬೆಂಗಳೂರಿನ ಮನೆ, ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಹಾಗೂ ಚಿಂತಾಮಣಿ ನಗರದಲ್ಲಿರುವ ಸಂಬಂಧಿಕರ ಎರಡು ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಬಿಬಿಎಂಪಿ ನಗರ ಯೋಜನೆ ಪೂರ್ವ ವಲಯ ಸಹಾಯಕ ನಿರ್ದೇಶಕ ಕೆ.ಬೀಸೆಟಪ್ಪಗೆ ಸೇರಿದ ಬೆಂಗಳೂರಿನ ಮನೆ, ಕಚೇರಿ ಮತ್ತು ಮಂಗಳೂರಿನ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ(ರೀಡರ್)ಡಿ.ಮಂಜುನಾಥಗೆ ಸೇರಿದ ಉಡುಪಿಯ ನಿವಾಸ, ಕಚೇರಿ ಮತ್ತು ದಾವಣಗೆರೆ, ಚಿಕ್ಕಮಗಳೂರಿನಲ್ಲಿರುವ ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಲಾಗಿದೆ.
ಕೃಷಿ ಇಲಾಖೆಯ ಉಪ ನಿರ್ದೇಶಕಿ ಹಂಸವೇಣಿಗೆ ಸೇರಿದ ದಾವಣಗೆರೆ ನಿವಾಸ, ಕಚೇರಿ ಮತ್ತು ಸಂಬಂಧಿಕರ ಮನೆ ಹಾಗೂ ಪತಿ ಕಾರ್ಯನಿರ್ವಹಿಸುತ್ತಿರುವ ಕಾರವಾರದ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಮೈಸೂರಿನ ಮೂಡಾ ಕಿರಿಯ ಅಭಿಯಂತರ ಕೆ.ಮಣಿಗೆ ಸೇರಿದ ನಿವಾಸ, ಕಚೇರಿ ಹಾಗೂ ಹುಣಸೂರಿನ ಸಂಬಂಧಿಕರ ಮನೆ ಮೇಲೆ ದಾಳಿ ಮಾಡಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿತ ಅಧಿಕಾರಿಗಳು ಮತ್ತು ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿದ ವೇಳೆ ಕೋಟ್ಯಂತರ ರೂ. ಮೌಲ್ಯದ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದ್ದು, ಪರಿಶೀಲನೆ ನಡೆಯುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳು
ಆರ್.ಶ್ರೀಧರ್, ಹೆಚ್ಚುವರಿ ನಿಬಂಧಕರು, ಸಹಕಾರ ನಿಬಂಧಕರ ಕಚೇರಿ ಬೆಂಗಳೂರು
ಹಂಸವೇಣಿ, ಉಪ ನಿರ್ದೇಶಕರು, ಕೃಷಿ ಇಲಾಖೆ, ದಾವಣಗೆರೆ
ಡಿ. ಮಂಜುನಾಥ್, ಪ್ರವಾಚಕರು(ರೀಡರ್), ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ, ಮಂಗಳೂರು
ಕೆ.ಬೀಸೆಟಪ್ಪ, ಸಹಾಯಕ ನಿರ್ದೇಶಕರು, ನಗರ ಯೋಜನೆ, ಪೂರ್ವ ವಲಯ, ಬಿಬಿಎಂಪಿ
ಕೆ.ಮಣಿ, ಕಿರಿಯ ಅಭಿಯಂತರರು, ಮೂಡಾ, ಮೈಸೂರು