Advertisement

ಎಸಿಬಿ ದಾಳಿ: ಕೋಟ್ಯಂತರ ರೂ.ಮೌಲ್ಯದ ಆಸ್ತಿ ಪತ್ತೆ

12:41 AM Jun 23, 2019 | Lakshmi GovindaRaj |

ಬೆಂಗಳೂರು: ಆದಾಯ ಮೀರಿ ಆಸ್ತಿಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ವರು ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಆರೋಪಿತ ಅಧಿಕಾರಿಗಳ ಕೋಟ್ಯಂತರ ರೂ.ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ.

Advertisement

ಶಾಂತಿನಗರ ಟಿ.ಟಿ.ಎಂ.ಸಿಯ ವಿಭಾಗೀಯ ಸರಕು ಮತ್ತು ಸೇವಾ ಕಚೇರಿಯ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಎಂ.ಬಿ. ನಾರಾಯಣಸ್ವಾಮಿ, ರಾಮನಗರ ಜಿಲ್ಲೆಯ ಬೆಂಗಳೂರು ಮಿಲ್ಕ್ ಯೂನಿಯನ್‌ನ (ಬಮೂಲ್‌) ಉಪವ್ಯವಸ್ಥಾಪಕ ಡಾ.ಶಿವಶಂಕರ್‌, ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಉಪ ವಿಭಾಗದ ಪಂಚಾಯತ್‌ ರಾಜ್‌ ಇಲಾಖೆಯ ಸಹಾಯಕ ಅಭಿಯಂತರ ಆರ್ಷದ್‌ ಪಾಷಾ

ಹಾಗೂ ಹಾಸನ ಲೋಕೋಪಯೋಗಿ ಇಲಾಖೆಯ ವಿಶೇಷ ವಿಭಾಗದ ಸಹಾಯಕ ಅಭಿಯಂತರ ಎಚ್‌.ಎಸ್‌ ಚೆನ್ನೇಗೌಡ ಅವರಿಗೆ 14 ಕಡೆಗಳಲ್ಲಿ ದಾಳಿ ಶುಕ್ರವಾರ ದಾಳಿ ನಡೆಸಲಾಗಿತ್ತು. ಈ ವೇಳೆ ಕೆಲ ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆ ಹಾಗೂ ಇತರೆ ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎಂದು ಎಸಿಬಿ ತಿಳಿಸಿದೆ.

ಬಮೂಲ್‌ ಉಪವ್ಯವಸ್ಥಾಪಕ ಡಾ.ಶಿವಶಂಕರ್‌, ತಮ್ಮ ಮತ್ತು ಕುಟುಂಬಸ್ಥರ ಹೆಸರಿನಲ್ಲಿ ರಾಮನಗರದಲ್ಲಿ ಮೂರು ಅಂತಸ್ತಿನ ಮನೆ, ಮೂರು ನಿವೇಶನ, ಯಲಹಂಕದಲ್ಲಿ ಒಂದು ನಿವೇಶನ, ದೊಡ್ಡಬಳ್ಳಾಪುರದ ಲಕ್ಷ್ಮೀದೇವಿಪುರದಲ್ಲಿ ಎರಡು ಎಕರೆ 16 ಗುಂಟೆ ಕೃಷಿ ಜಮೀನು, 530 ಗ್ರಾಂ ಚಿನ್ನ, ಒಂದು ಕಾರು, ಒಂದು ದ್ವಿಚಕ್ರ ವಾಹನ, 30.60 ಲಕ್ಷರೂ. ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿಗಳು ಮತ್ತು ಐದು ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಹೊಂದಿದ್ದಾರೆ.

ಉಪ ವಿಭಾಗದ ಪಂಚಾಯತ್‌ ರಾಜ್‌ ಇಲಾಖೆಯ ಸಹಾಯಕ ಅಭಿಯಂತರ ಆರ್ಷದ್‌ ಪಾಷ, ತಮ್ಮ ಮತ್ತು ಕುಟುಂಬಸ್ಥರ ಹೆಸರಿನಲ್ಲಿ ಎರಡು ಮನೆ, ಐದು ನಿವೇಶನ, ಏಳು ಎಕರೆ ಕೃಷಿ ಜಮೀನು, 428 ಗ್ರಾಂ ಚಿನ್ನ, 235 ಗ್ರಾಂ ಬೆಳ್ಳಿ, ಎರಡು ಕಾರು, ಒಂದು ದ್ವಿಚಕ್ರ ವಾಹನ ಹಾಗೂ 12.49 ಲಕ್ಷ ರೂ. ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು ಸಿಕ್ಕಿವೆ.

Advertisement

ಹಾಸನ ಲೋಕೋಪಯೋಗಿ ಇಲಾಖೆಯ ವಿಶೇಷ ವಿಭಾಗದ ಸಹಾಯಕ ಅಭಿಯಂತರ ಎಚ್‌.ಎಸ್‌ ಚೆನ್ನೇಗೌಡ, ತಮ್ಮ ಮತ್ತು ಕುಟುಂಬಸ್ಥರ ಹೆಸರಿನಲ್ಲಿ ಒಂದು ಮನೆ, ಮೂರು ನಿವೇಶನ, 3.6 ಎಕರೆ ಕೃಷಿ ಜಮೀನು, 293 ಗ್ರಾಂ ಚಿನ್ನ, 2 ಕೆ.ಜಿ. 484 ಗ್ರಾಂ ಬೆಳ್ಳಿ , ಒಂದು ಕಾರು, ಎರಡು ದ್ವಿಚಕ್ರ ವಾಹನ, 15 ಲಕ್ಷ ರೂ. ಮೌಲ್ಯದ ಎಲ್‌ಐಸಿ ಪಾಲಿಸಿ ಠೇವಣಿಗಳು, ಒಂದು ಲಾಕರ್‌ ಹಾಗೂ 10 ಲಕ್ಷ ರೂ. ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ ಎಂದು ಎಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

ಮಹತ್ವದ ದಾಖಲೆ ಪತ್ತೆ: ಸರಕು ಮತ್ತು ಸೇವಾ ಕಚೇರಿಯ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಎಂ.ಬಿ. ನಾರಾಯಣಸ್ವಾಮಿ, ತಮ್ಮ ಮತ್ತು ಕುಟುಂಬಸ್ಥರ ಹೆಸರಿನಲ್ಲಿ ಕೋಲಾರ ಟೌನ್‌ನಲ್ಲಿ ಮೂರು ಅಂತಸ್ತಿನ ಮನೆ (7560 ಚ.ಅಡಿ ಆರ್‌ಸಿಸಿ ಕಟ್ಟಡ), ಬೆಂಗಳೂರು ಮೇಡಹಳ್ಳಿಯಲ್ಲಿ ಮೂರು ನಿವೇಶನಗಳು, ಕೋಲಾರ ಮತ್ತು ಚಿಂತಾಮಣಿ ತಾಲೂಕಿನಲ್ಲಿ 45 ಎಕರೆ ಕೃಷಿ ಜಮೀನು, 123 ಗ್ರಾಂ ಚಿನ್ನ, 1 ಕೆ.ಜಿ. 310 ಗ್ರಾಂ ಬೆಳ್ಳಿ,, ಎರಡು ಟ್ಯಾ†ಕ್ಟರ್‌, ಮೂರು ಕಾರು, 10 ದ್ವಿಚಕ್ರ ವಾಹನ, 60 ಸಾವಿರ ರೂ. ಬ್ಯಾಂಕ್‌ ಠೇವಣಿಗಳು, ವಿಮೆ ಪಾಲಿಸಿಗಳು, 13.53 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಮತ್ತು ಇತರೆ ಜಮೀನಿನ ದಾಖಲೆಗಳು ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next