Advertisement
ನಗರದ ನಗರಸಭೆ ಕಚೇರಿ ಮೇಲೆ ಮಂಗಳವಾರ ಮಧ್ಯಾಹ್ನ 1 ಗಂಟೆಯಲ್ಲಿ ಎಸಿಬಿ ಡಿವೈಎಸ್‌ಪಿ ಗೋಪಾಲ್ ಜೋಗಿನ್ ನೇತೃತ್ವದಲ್ಲಿ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ವಿವಿಧ ಇಲಾಖೆಗಳ ದಾಖಲೆಗಳನ್ನು ಪರಿಶೀಲಿಸಿದರು. ನಗರಸಭೆಯಲ್ಲಿ ಇ-ಖಾತೆ ಸಂಬಂಧಪಟ್ಟಂತೆ ಸಕಾಲ ಯೋಜನೆಯಲ್ಲಿ ಅರ್ಜಿ ವಿಲೇವಾರಿ ಮಾಡದೆ, ಅಧಿಕಾರಿಗಳ ವಿಳಂಬ ಧೋರಣೆ ಅನುಸರಿಸಿ, ಕಾಲಹರಣ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.
Related Articles
Advertisement
ದಾಖಲೆಗಳ ಪರಿಶೀಲನೆ: ಕಂದಾಯ, ಆರೋಗ್ಯ ಇಲಾಖೆ, ಟಪಾಲು ಶಾಖೆ, ಲೆಕ್ಕಾಧಿಕಾರಿಗಳ ಕಚೇರಿ, ಪೌರಾಯುಕ್ತರ ಕಚೇರಿ ಸೇರಿದಂತೆ ವಿವಿಧ ಇಲಾಖೆ ಕಚೇರಿಗಳಲ್ಲಿ ಅಧಿಕಾರಿಗಳು ದಾಖಲೆಗಳು ಮತ್ತು ಗಣಕ ಯಂತ್ರಗಳನ್ನು ಪರಿಶೀಲನೆ ಮಾಡಿದ್ದಾರೆ. ಮಧ್ಯಾಹ್ನ 1 ಗಂಟೆಯಿಂದ ಪರಿಶೀಲನೆ ಆರಂಭಿಸಿದ ಅಧಿಕಾರಿಗಳು, ಸತತವಾಗಿ 8 ಗಂಟೆಗಳ ಕಾಲ ನಗರಸಭೆ ಕಚೇರಿಯನ್ನು ಜಾಲಾಡಿದ್ದು, ನಗರಸಭೆಯಲ್ಲಿ ನಡೆದಿರುವ ಅಕ್ರಮಗಳ ಆರೋಪಕ್ಕೆ ಸಂಬಂಧಪಟ್ಟಂತೆ ಅಗತ್ಯ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಅಗತ್ಯವಿದ್ದರೆ ಮರುದಿನ ಬುಧವಾರವೂ ದಾಖಲೆಗಳ ಪರಿಶೀಲನೆ ಮುಂದುವರಿಯುವ ಸಾಧ್ಯತೆಗಳು ದಟ್ಟವಾಗಿವೆ.
ಇತ್ತೀಚಿಗೆ ನಗರ ಸಭೆಯ ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಇ-ಖಾತೆ ಮಾಡಿಕೊಡಲು ಬಾಣಂತಮಾರಮ್ಮ ಬಡಾವಣೆ ನಿವಾಸಿಯೋಬ್ಬರ ಬಳಿ 15 ಸಾವಿರ ರೂ., ಲಂಚಕ್ಕೆ ಬೇಡಿಕೆ ಇಟ್ಟು 10 ಸಾವಿರ ರೂ. ಮುಂಗಡವಾಗಿ ಲಂಚ ಪಡೆಯುವಾಗ ಲಂಚ ನೀಡಿದ ವ್ಯಕ್ತಿ ಅದನ್ನು ವಿಡಿಯೋ ಚಿತ್ರೀಕರಿಸಿ ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ.
ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳದೆ ಪ್ರಕರಣವನ್ನು ಮುಚ್ಚಿಹಾಕಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಲಂಚ ಪ್ರಕರಣದ ತನಿಖೆಯು ಮುಂದುವರಿಯಲಿದೆ ಎಂದು ಅಧಿಕಾರಿಯೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.