ಕಲಬುರಗಿ: ಬೀದರ್ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾಧಿಕಾರಿ ತಿಪ್ಪಣ್ಣ ಸಿರಸಗಿ ಅವರ ಕಲಬುರಗಿ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದಾರೆ.
ಹೈಕೋರ್ಟ್ ಪಕ್ಕದಲ್ಲಿರುವ ಅಕ್ಕಮಹಾದೇವಿ ಬಡಾವಣೆಯ ಕೆಎಚ್ ಬಿ ಕಾಲೊನಿಯಲ್ಲಿರುವ ಐಷಾರಾಮಿ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿ ತಪಾಸಣೆ ನಡೆಸುತ್ತಿದ್ದಾರೆ.
ತಿಪ್ಪಣ್ಣ ಸಿರಸಗಿ ಈ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಲಬುರ್ಗಿ ತಾಲ್ಲೂಕು ಅಧಿಕಾರಿಯಾಗಿ ಕೂಡ ಕೆಲಸ ಮಾಡಿದ್ದರು. ನೌಕರಿ ಕೊಡಿಸುವುದಾಗಿ ಹಲವರ ಬಳಿ ಹಣ ತೆಗೆದುಕೊಂಡಿರುವ ಆರೋಪ ಎದುರಿಸುತ್ತಿರುವಾಗಲೇ ಸಿರಸಗಿ ಅವರನ್ನು ಬೀದರ್ ಜಿಲ್ಲೆಗೆ ವರ್ಗ ಮಾಡಲಾಗಿತ್ತು.
ಇದನ್ನೂ ಓದಿ:ಜಿ.ಎಸ್.ಟಿ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ
ಬೆಳಿಗ್ಗೆ ಮನೆಯ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ಮನೆಯ ಸದಸ್ಯರೆಲ್ಲರ ಸಮ್ಮುಖದಲ್ಲಿ ಹಲವಾರು ದಾಖಲೆ ಪತ್ರಗಳು, ಬಂಗಾರದ ಆಭರಣ ಹಾಗೂ ಐಷಾರಾಮಿ ವಸ್ತುಗಳ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಎರಡು ಬೈಕ್, ಕಾರು ಹಾಗೂ ಇತರೆ ವಸ್ತುಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ ಎಂದು ಎಸಿಬಿ ಮೂಲಗಳು ತಿಳಿಸಿವೆ.