ಮಂಡ್ಯ: ಮೈಸೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಎ.ವಿ.ಚನ್ನವೀರಪ್ಪ ಅವರಿಗೆ ಸೇರಿದ ನಿವಾಸ ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿ ಮೇಲೆ ಮಂಗಳವಾರ ಬೆಳ್ಳಂಬೆಳಿಗ್ಗೆ ಏಕಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಸಂಪಾದಿಸಿದ ಹಣ, ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿದ್ದಾರೆoಬ ಖಚಿತ ಮಾಹಿತಿ ಆಧಾರದ ಮೇಲೆ ಮಂಡ್ಯ ಕುವೆಂಪುನಗರದ 6ನೇ ಕ್ರಾಸ್‌ನಲ್ಲಿರುವ ಹಾಲಿ ವಾಸವಿರುವ ನಿವಾಸ, ಮಂಡ್ಯ ತಾಲೂಕು ಆಲಕೆರೆ ಗ್ರಾಮದಲ್ಲಿರುವ ಸ್ವಂತ ಮನೆ, ಶ್ರೀರಂಗಪಟ್ಟಣ ತಾಲೂಕು ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿರುವ ಸಂಬoಧಿ ನಿವಾಸ ಹಾಗೂ ಮೈಸೂರು ಕಚೇರಿಗೆ ಮಂಡ್ಯ ಎಸಿಬಿ ಡಿವೈಎಸ್ಪಿ ಎಂ.ಧರ್ಮೇoದ್ರ, ಇನ್ಸ್ಪೆಕ್ಟರ್ ಸತೀಶ್ ನೇತೃತ್ವದಲ್ಲಿ ದಾಳಿ ನಡೆಸಿ ನಗದು, ಚಿನ್ನಾಭರಣ ಹಾಗೂ ಸ್ಥಿರಾಸ್ತಿ, ಚರಾಸ್ತಿಗೆ ಸಂಬoಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಎ.ವಿ.ಚನ್ನವೀರಪ್ಪ 1995ರಲ್ಲಿ ಸೇವೆಗೆ ಸೇರಿದ್ದು, ಇದುವರೆಗೂ ಅವರ ಒಟ್ಟು ಆಸ್ತಿ ಶೇ.126.36ರಷ್ಟಿದೆ. ಆದರೆ ದಾಳಿಯ ಸಂದರ್ಭದಲ್ಲಿ ಶೇ.149.51ರಷ್ಟಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ದಾಳಿ ಸಂದರ್ಭದಲ್ಲಿ ಅರ್ಧ ಕೆಜಿ ಚಿನ್ನಾಭರಣ, 1 ಕೆಜಿ ಬೆಳ್ಳಿ, 92 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. 74 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ, 43 ಲಕ್ಷ ರೂ. ಮೌಲ್ಯದ ಚರಾಸ್ತಿಗಳು ಪತ್ತೆಯಾಗಿದೆ. ದಾಳಿಯ ಸಂದರ್ಭದಲ್ಲಿ ಒಟ್ಟು 1.18 ಕೋಟಿ ರೂ. ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ :ಮುಂಬೈಗೆ ಮತ್ತೆ ಲಾಕ್‌ಡೌನ್ ಭೀತಿ : ಸಚಿವ ಅಸ್ಲಾಮ್ ಶೇಖ್ ಸುಳಿವು
ಕುವೆಂಪು ನಗರದಲ್ಲಿರುವ ಡೂಪ್ಲೆಕ್ಸ್ ಮನೆ 25 ಲಕ್ಷ ರೂ, ಪತ್ನಿ ಹೆಸರಿನಲ್ಲಿ ಆಲಕೆರೆ ಗ್ರಾಮದಲ್ಲಿ ನಿರ್ಮಿಸಿರುವ ಮನೆ 45 ಲಕ್ಷ ರೂ, ಕುವೆಂಪುನಗರದಲ್ಲಿರುವ ನಿವೇಶನ 1.50 ಲಕ್ಷ ರೂ, ಆಲಕೆರೆ ಗ್ರಾಮದಲ್ಲಿರುವ ನಿವೇಶನ 15 ಸಾವಿರ ರೂ. ಸೇರಿದಂತೆ 72,25,೦೦೦ ಸ್ಥಿರಾಸ್ತಿ ಮೌಲ್ಯವಾಗಿದೆ. ದಾಳಿಯ ನಂತರ 74,58,೦೦0 ಸ್ಥಿರಾಸ್ತಿ ಇರುವುದು ಗೊತ್ತಾಗಿದೆ. ಅಂತೆಯೇ ಮೂಲಗಳ ಮಾಹಿತಿಯಂತೆ 33,15,೦೦೦ ರೂ. ಮೌಲ್ಯದ ಚರಾಸ್ತಿ ಇದೆ. ದಾಳಿ ನಂತರ 43,65,331 ರೂ. ಇದೆ ಎಂದು ತಿಳಿದು ಬಂದಿದೆ.