Advertisement

ಲಂಚಕ್ಕೆ ಬೇಡಿಕೆ: ಕಾನ್ಸ್ ಸ್ಟೇಬಲ್, ಆರ್‌.ಐ ಎಸಿಬಿ ವಶಕ್ಕೆ! ಇನ್ಸ್‌ಪೆಕ್ಟರ್‌ ಪರಾರಿ

10:37 AM Jan 09, 2021 | Team Udayavani |

ಬೆಂಗಳೂರು: ವಿವಾದಿತ ಜಮೀನಿಗೆ ಸಂಬಂಧಪಟ್ಟಂತೆ ದಾಖಲೆಗಳನ್ನು ಮಾಡಿಕೊಡಲು ಹಾಗೂ ರಕ್ಷಣೆ ನೀಡಲು
ಲಂಚಪಡೆಯುತ್ತಿದ್ದ ರಾಜಸ್ವ ನಿರೀಕ್ಷಕ (ಆರ್‌ಐ) ಹಾಗೂ ಪೊಲೀಸ್‌ ಹೆಡ್‌ ಕಾನ್ಸ್ ಸ್ಟೇಬಲ್‌ವೊಬ್ಬರು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ. ಇದೇ ಪ್ರಕರಣದಲ್ಲಿ ಚಿಕ್ಕಜಾಲ ಪೊಲೀಸ್‌ ಠಾಣೆ ಇನ್ಸ್‌ ಪೆಕ್ಟರ್‌ ಬಿ.ಎಸ್‌.ಯಶ್ವಂತ್‌ ಕೂಡ ಆರೋಪಿಯಾಗಿದ್ದು ಎಸಿಬಿಗೆ ಸಿಗದೆ ಪರಾರಿಯಾಗಿದ್ದಾರೆ.

Advertisement

ಜಮೀನು ಮಾಲೀಕರಿಂದ ಲಂಚ ಪಡೆಯುತ್ತಿದ್ದ ವೇಳೆಯೇ ಶುಕ್ರವಾರ ಪ್ರತ್ಯೇಕ ಕಾರ್ಯಾಚರಣೆ ನಡೆಸಿರುವ ಭ್ರಷ್ಟಾಚಾರ
ನಿಗ್ರಹ ಘಟಕ(ಎಸಿಬಿ) ಅಧಿಕಾರಿಗಳು, ಚಿಕ್ಕಜಾಲದ ರಾಜಸ್ವ ನಿರೀಕ್ಷಕ (ಆರ್‌ಐ) ಎಚ್‌. ಪುಟ್ಟಹನುಮಯ್ಯ ಅಲಿಯಾಸ್‌ ಪ್ರವೀಣ್‌, ಕಾನ್ಸ್ ಸ್ಟೇಬಲ್‌ ರಾಜು ಅವರನ್ನು ಬಂಧಿಸಿದೆ.

ಆರೋಪಿಗಳು ಸ್ವೀಕರಿಸುತ್ತಿದ್ದ ಲಂಚದ ಹಣ 11ಲಕ್ಷ ರೂ.ಗಳನ್ನು ಜಪ್ತಿ ಮಾಡಿರುವ ಎಸಿಬಿ ತಲೆಮರೆಸಿಕೊಂಡಿರುವ ಇನ್ಸ್‌ಪೆಕ್ಟರ್‌ ಯಶ್ವಂತ್‌ ಬಂಧನಕ್ಕೆ ಬಲೆಬೀಸಿದೆ.

ಇದನ್ನೂ ಓದಿ:ಗುಜರಾತ್ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಮಾಧವ ಸಿಂಗ್ ಸೋಲಂಕಿ ನಿಧನ

ತಾತ್ಕಾಲಿಕ ತಡೆಯಾಜ್ಞೆ: ಬೆಂಗಳೂರಿನ ನಿವಾಸಿಯೊಬ್ಬರು ರಘವೀರ್‌ (ಹೆಸರು ಬದಲಿಸಲಾಗಿದೆ) ಜಾಲ ಹೋಬಳಿಯಲ್ಲಿ ಐದು ಎಕರೆ ಜಮೀನು ಖರೀದಿಸಿ ಮಾಲೀಕರಿಂದ 2018ರಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಆದರೆ, ಇತ್ತೀಚೆಗೆ ಜಮೀನಿನ ಮೂಲ ಮಾಲೀಕರು ಅದೇ ಜಮೀನನ್ನು ಮತ್ತೂಬ್ಬರಿಗೆ ಅಗ್ರಿಮೆಂಟ್‌ ಮಾಡಿಕೊಂಡಿದ್ದರು. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ರಘುವೀರ್‌, ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ನ್ಯಾಯಾಲಯ ಜಮೀನಿನ ಹಕ್ಕಿಗೆ ಸಂಬಂಧಿಸಿದಂತೆ ರಘುವೀರ್‌ ಪರವಾಗಿ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು.

Advertisement

50 ಲಕ್ಷ ರೂ. ಲಂಚಕ್ಕೆ ಆರ್‌ಐ ಬೇಡಿಕೆ: ಇದಾದ ಬಳಿಕ ಜಮೀನಿಗೆ ಸಂಬಂಧಿಸಿದಂತೆ ಪಹಣಿ, ಮ್ಯುಟೇಶನ್‌ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ರಘುವೀರ್‌ ತಹಶೀಲ್ದಾರ್‌ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಜಮೀನು ದಾಖಲೆಗಳನ್ನು ಮಾಡಿಕೊಡಲು ಆರ್‌ಐ ಎಚ್‌.ಪುಟ್ಟಹನುಮಯ್ಯ, ರಘುವೀರ್‌ ಬಳಿ 50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

10 ಲಕ್ಷ ರೂ. ಲಂಚಕ್ಕೆ ಇನ್ಸ್‌ಪೆಕ್ಟರ್‌ ಬೇಡಿಕೆ: ಅದೇ ರೀತಿ ಜಮೀನಿಗೆ ಸಂಬಂಧಿಸಿದಂತೆ “ಜಮೀನು ನ್ಯಾಯಾಲಯದ ದಾವೆಯಲ್ಲಿದೆ’ ಎಂಬ ಬೋರ್ಡ್‌ ಅಳವಡಿಸಿ ರಕ್ಷಣೆ ನೀಡುವಂತೆ ಕೋರಿ ಚಿಕ್ಕಜಾಲ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಇನ್ಸ್‌ಪೆಕ್ಟರ್‌ ಯಶ್ವಂತ್‌ 10 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ನೊಂದ ರಘುವೀರ್‌ ಎಸಿಬಿಯಲ್ಲಿ ದೂರು ದಾಖಲಿಸಿದ್ದರು.

ಬೆಳ್ಳಂಬೆಳಗ್ಗೆ ಬಂಧನ!
ರಘುವೀರ್‌ ಅವರು ನೀಡಿದ ದೂರಿನ ಅನ್ವಯ ಆರೋಪಿಗಳ ವಿರುದ್ಧ ಎಫ್ ಐಆರ್‌ ದಾಖಲಿಸಿಕೊಂಡು ಶುಕ್ರವಾರ ಎಸಿಬಿಯ ಎರಡು ತಂಡಗಳು ಕಾರ್ಯಾಚರಣೆಗೆ ಇಳಿದಿದ್ದವು. ಅದರಂತೆ ಶೇಷಾದ್ರಿಪುರಂನಲ್ಲಿ ರಘುವೀರ್‌ ಅವರಿಂದ ಪುಟ್ಟಹನುಮಯ್ಯ ಐದು ಲಕ್ಷ ರೂ. ಲಂಚ ಪಡೆಯುವಾಗ ಬಂಧಿಸಲಾಯಿತು. ಅದೇ ರೀತಿ ಚಿಕ್ಕಜಾಲ ಠಾಣೆ ಸಮೀಪವೇ ಇನ್ಸ್‌ಪೆಕ್ಟರ್‌ ಯಶ್ವಂತ್‌
ಪರವಾಗಿ ಹೆಡ್‌ ಕಾನ್ಸ್ ಸ್ಟೇಬಲ್ ರಾಜು ಆರು ಲಕ್ಷ ರೂ. ಲಂಚ ಪಡೆಯುವಾಗ ಬಂಧಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಯಶ್ವಂತ್‌ ಎ1 ಆರೋಪಿ!
ರಘುವೀರ್‌ ಅವರು ನೀಡಿರುವ ದೂರಿನ ಅನ್ವಯ ಭ್ರಷ್ಟಾಚಾರ ನಿಗ್ರಹ ಕಾಯಿದೆ ಅಡಿ ಎಫ್ಐಆರ್‌ ದಾಖಲಿಸಲಾಗಿದೆ.
ಇನ್ಸ್‌ಪೆಕ್ಟರ್‌ ಯಶ್ವಂತ್‌ ಪ್ರಕರಣಕ್ಕೆ ಮೊದಲ ಆರೋಪಿಯಾಗಿದ್ದಾರೆ. ಆರೋಪಿಗಳು ಈ ಹಿಂದೆಯೂ ದೂರುದಾರ ರಘುವೀರ್‌ ಅವರಿಂದ ಹಣ ಪಡೆದಿರುವುದು ಗೊತ್ತಾಗಿದೆ. ಎಸಿಬಿಯಲ್ಲಿ ದೂರು ದಾಖಲಾಗಿದೆ ಎಂಬ ವಿಚಾರ ಗೊತ್ತಾದ ಕೂಡಲೇ ಯಶ್ವಂತ್‌
ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಕ್ರಮವಹಿಸಲಾಗಿದ್ದು ಪ್ರಕರಣದ ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ
ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next