ಬೆಂಗಳೂರು: ರಸ್ತೆ ವಿಸ್ತರಣೆಗೆ ವಶಪಡಿಸಿಕೊಳ್ಳಲಾದ ನಿವೇಶನಗಳು ಹಾಗೂ ಕಟ್ಟಡಗಳ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮತ್ತು ಬಿಡಿಎಗೆ ಸೇರಿದ ಅಸಲಿ ಕಡತಗಳನ್ನು ಮನೆಯಲ್ಲಿಟ್ಟುಕೊಂಡು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿದ್ದ ಇಬ್ಬರು ಖಾಸಗಿ ಸರ್ವೇಯರ್‌ಗಳ ನಿವಾಸದ ಮೇಲೆ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆರ್‌ಎಂವಿ ಲೇಔಟ…ನ 2ನೇ ಹಂತ ನಿವಾಸಿ ಅಭಿಷೇಕ್ ಹಾಗೂ ಗೆದ್ದಲಹಳ್ಳಿಯ ಮನೋಜ್ ಎಂಬುವವರ ನಿವಾಸಗಳ ಮೇಲೆ ಬೆಳ್ಳಂ ಬೆಳಗ್ಗೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ.
ಏ.26ರಂದು ಬಿಡಿಎ ಸಹಾಯಕ ಅಭಿಯಂತರ ಕೃಷ್ಣಲಾಲ್ ಹಾಗೂ ಇತರೆ ಇಬ್ಬರು ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಷೇಕ್ ಮತ್ತು ಮನೋಜ್ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ದಾಳಿ ಸಂದರ್ಭದಲ್ಲಿ ಬಿಡಿಎ ಮತ್ತು ಬಿಬಿಎಂಪಿಗೆ ಸಂಬಂಧಿಸಿದ ಅಸಲಿ ದಾಖಲೆಗಳು ಪತ್ತೆಯಾಗಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ. ಈ ಇಬ್ಬರೂ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ದಾಳಿಗೊಳಗಾದ ಇಬ್ಬರು ಸರ್ವೇಯರ್‌ಗಳೂ ಬಿಡಿಎ, ಬಿಬಿಎಂಪಿ ಅಸಲಿ ದಾಖಲಾತಿ ಇಟ್ಟುಕೊಂಡು ಡೆವಲಪ್‌ಮೆಂಟ್ ರೈಡ್ ಸರ್ಟಿಫಿಕೇಟ್ ಮೂಲಕ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ನಷ್ಟ ಉಂಟು ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದು ಎಸಿಬಿ ಅಧಿಕಾರಿಗಳು ಹೇಳಿದರು.
ಏನಿದು ಪ್ರಕರಣ?: ಕೃಷ್ಣಲಾಲ್ ಈ ಹಿಂದೆ ಬಿಬಿಎಂಪಿಯಲ್ಲಿ ಸಹಾಯಕ ಅಭಿಯಂತರಾಗಿದ್ದ ವೇಳೆಯಲ್ಲಿ ಮಹದೇವಪುರದ ಭಟ್ಟರಹಳ್ಳಿಯಲ್ಲಿ ರಸ್ತೆ ಅಗಲೀಕರಣ ವಿಚಾರದಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಬಿಬಿಎಂಪಿ ರಸ್ತೆ ಅಗಲೀಕರಣಕ್ಕೆ ವಶಪಡಿಸಿಕೊಳ್ಳಲಾದ ನಿವೇಶನಗಳು ಮತ್ತು ಕಟ್ಟಡಗಳ ಜಾಗಕ್ಕಿಂತ ಹೆಚ್ಚು ಜಾಗಕ್ಕೆ ಬೆಲೆ ನಿಗದಿ ಮಾಡಿದ್ದರು.
ಅಲ್ಲದೆ, ಸಿಎಂಸಿ ಮತ್ತು ಬಿಬಿಎಂಪಿ ಅಭಿವೃದ್ದಿ ಪಡಿಸಿದ ಅಡ್ಡರಸ್ತೆಗಳನ್ನು ಸಹ ಖಾಸಗಿ ವ್ಯಕ್ತಿಗಳ ಆಸ್ತಿಯೆಂದು ಬಿಂಬಿಸಿದ್ದರು. ಈ ಮೂಲಕ ಬಿಬಿಎಂಪಿ ಮತ್ತು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವುಂಟು ಮಾಡಿದ್ದರು. ಈ ಬಗ್ಗೆ ಬೆಂಗಳೂರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಖಾಸಗಿ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಸದ್ಯ ಕೃಷ್ಣಲಾಲ್ ತಲೆಮರೆಸಿಕೊಂಡಿದ್ದು, ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.