Advertisement

ಆರು ಮಂದಿ ಸರ್ಕಾರಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ

12:08 PM Apr 13, 2018 | Team Udayavani |

ಬೆಂಗಳೂರು: ಆದಾಯ ಮೀರಿ ಆಸ್ತಿಗಳಿಸಿದ ಆರೋಪದ ಮೇಲೆ ಆರು ಸರ್ಕಾರಿ ಅಧಿಕಾರಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ಎರಡು ದಿನಗಳ ಹಿಂದೆ ದಾಳಿ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇದೀಗ ಆ ಅಧಿಕಾರಿಗಳ ದಾಖಲೆಗಳ ಪರಿಶೀಲನೆ ವೇಳೆ ಪತ್ತೆಯಾದ ಸ್ಥಿರ ಮತ್ತು ಚರ ಆಸ್ತಿಗಳ ವಿವರ ಬಿಡುಗಡೆ ಮಾಡಿದೆ.

Advertisement

ಎಸಿಬಿ ದಾಳಿಗೊಳಗಾದ ಹುಬ್ಬಳ್ಳಿಯ ಕೆಪಿಟಿಸಿಎಲ್‌ ಕಚೇರಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್‌ ಎನ್‌.ಸವಣೂರ ಬಳಿ ಹುಬ್ಬಳ್ಳಿಯ ಶಿರೂರು ಪಾರ್ಕ್‌ನಲ್ಲಿ ಒಂದು ವಾಸದ ಮನೆ, 4 ಖಾಲಿ ಫ್ಲಾಟ್‌ಗಳು, ಶಿರಹಟ್ಟಿಯ ನವೆಬಾವನೂರು ಗ್ರಾಮದಲ್ಲಿ 8 ಎಕರೆ ಕೃಷಿ ಜಮೀನು, 300 ಗ್ರಾಂ ಚಿನ್ನ, 432 ಗ್ರಾಂ ಬೆಳ್ಳಿ, 1 ಬೈಕ್‌ ಮತ್ತು 6 ಮೊಬೈಲ್‌ಗ‌ಳು ಇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅದೇರೀತಿ ಧಾರವಾಢ ಅರಣ್ಯ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಾರ್ಶ್ವನಾಥ್‌ ವರೂರ ಅವರಲ್ಲಿ ದೊಡ್ಡನಾಯಕನ ಕೊಪ್ಪ ವಾಸದ 1 ಮನೆ, ಹು-ಧಾ ನಗರದಲ್ಲಿ 5 ಖಾಲಿ ಫ್ಲಾಟ್‌ಗಳು, ಮಾರಕಟ್ಟಿ ಗ್ರಾಮದಲ್ಲಿ 1.20 ಎಕರೆ ಮತ್ತು ಛಟ್ಟಿ ಗ್ರಾಮದಲ್ಲಿ 1.05 ಎಕರೆ ಕೃಷಿ ಜಮೀನು, 377 ಗ್ರಾಂ ಚಿನ್ನ, 2 ಕೆ.ಜಿ. 290 ಗ್ರಾಂ ಬೆಳ್ಳಿ, 1 ಮಾರುತಿ ಆಲ್ಟೋ ಕಾರು, 1 ಬೈಕ್‌, 66 ಸಾವಿರ ನಗದು ಹಾಗೂ ವಿವಿಧ ಬ್ಯಾಂಕ್‌ ಖಾತೆಗಳಲ್ಲಿ 13.50 ಲಕ್ಷ ನಗದು ಪತ್ತೆಯಾಗಿದೆ.

ಕುಂದಾಪುರ ತಾಲೂಕು ಪಂಚಾಯಿತಿ ಜೂನಿಯರ್‌ ಎಂಜಿನಿಯರ್‌ ರವಿ ಶಂಕರ್‌ ಬಳಿ ಕುಂದಾಪುರದ 3 ಮನೆಗಳು, 4 ನಿವೇಶನಗಳು, 1.113 ಕೆ.ಜಿ. ಚಿನ್ನ, 1.074 ಕೆ.ಜಿ. ಬೆಳ್ಳಿ, 1 ಮಾರುತಿ ಸ್ವಿಫ್ಟ್ ಕಾರು, 1 ಬೈಕ್‌, 18.79 ಲಕ್ಷ ನಗದು ಹಾಗೂ 2 ಐಪೋನ್‌, 2 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಇವೆ.

ಬೆಂಗಳೂರಿನ ತಲಘಟ್ಟಪುರದ ಬಿಬಿಎಂಪಿ ಕಂದಾಯ ನಿರೀಕ್ಷಕ ಜಿ.ಎಂ.ಶಿವಕುಮಾರ್‌ ಅವರಿಗೆ ವಾಜರಹಳ್ಳಿಯಲ್ಲಿ 2 ವಸತಿ ಸಂಕೀರ್ಣ, 4 ನಿವೇಶನಗಳು, 880 ಗ್ರಾಂ ಚಿನ್ನ, 4.148 ಕೆ.ಜಿ. ಬೆಳ್ಳಿ, 1 ಟೋಯೋಟಾ ಕ್ರಿಸ್ಟಾ ಕಾರು, 2 ಮಾರುತಿ ಆಲ್ಟೋ ಕಾರು, 1 ಬೈಕ್‌, 4.23 ಲಕ್ಷ ನಗದು, 2 ಲಕ್ಷ ರೂ.ನ ಎಲ್‌ಐಸಿ ಪಾಲಿಸಿಗಳು, 16.69 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

Advertisement

ಮೈಸೂರು ಕಾರ್ಪೊರೇಷನ್‌ ವಾಟರ್‌ ಇನ್‌ಸ್ಪೆಕ್ಟರ್‌ ಟಿ.ಎಸ್‌.ಕೃಷ್ಣೇಗೌಡ ಅವರಿಗೆ ಮೈಸೂರಿನಲ್ಲಿ 2 ವಾಸದ ಮನೆ, 1 ನಿವೇಶನ, ತಿಪ್ಪೂರು ಗ್ರಾಮದಲ್ಲಿ 20 ಗುಂಟೆ ಜಮೀನು, 532 ಗ್ರಾಂ ಚಿನ್ನ, 750 ಗ್ರಾಂ ಬೆಳ್ಳಿ, 1 ಸ್ಯಾಂಟ್ರೋ ಕಾರು ಹಾಗೂ 3 ಬೈಕ್‌ಗಳು ಮತ್ತು 1 ಲಕ್ಷ ರೂ. ನಗದು ಸಿಕ್ಕಿದೆ.

ದಾವಣಗೆರೆಯ ಗುರುಸಿದ್ದಾಪುರ ಗ್ರಾಮದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜ್‌ ಬಳಿ ದಾವಣಗೆರೆಯ ಎಸ್‌ಎಸ್‌ ಲೇಔಟ್‌ನಲ್ಲಿ 1 ವಾಸದ ಮನೆ, ವೆಂಕಾಟಪುರದ ವಿವಿಧ ಸರ್ವೆ ನಂಬರ್‌ಗಳಲ್ಲಿ 33.21 ಎಕರೆ ಕೃಷಿ ಜಮೀನು, 586 ಗ್ರಾಂ ಚಿನ್ನ, 250 ಗ್ರಾಂ ಬೆಳ್ಳಿ, 2 ಕಾರು, 4 ಬೈಕ್‌ಗಳು, 2 ಮೊಬೈಲ್‌ ಮತ್ತು 3 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿತ ಆರು ಮಂದಿ ಸರ್ಕಾರಿ ಅಧಿಕಾರಿಗಳ ವಿರುದ್ಧ ತನಿಖೆ ಮುಂದುವರಿದಿದ್ದು, ಇವರು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಮುಂದುವರಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next