ಬೆಂಗಳೂರು: ಟಿಡಿಆರ್ (ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳು) ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ “ಭ್ರಷ್ಟರ ಬೇಟೆ’ ಮುಂದುವರಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು, ಶುಕ್ರವಾರ ಹಗರಣದ ಏಜೆಂಟ್‌ಗಳು ಮತ್ತು ಬ್ಯಾಂಕ್ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಕಾಟನ್‌ಪೇಟೆ ನಿವಾಸಿ ರಾಜೇಶ್ ಕುಮಾರ್ ಎಂಬಾತನ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಇದೇ ವೇಳೆ ಹಲಸೂರು ಗೇಟ್ ಪೊಲೀಸ್ ಠಾಣೆ ಸಮೀಪದಲ್ಲಿರುವ ಶ್ರೀ ಬನಶಂಕರಿ ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ಮೇಲಿನ ದಾಳಿಯನ್ನು ಶುಕ್ರವಾರವೂ ಮುಂದುವರಿಸಿದ್ದಾರೆ. ಎಸಿಬಿ ಎಸ್ಪಿ ಸಂಜೀವ್ ಪಾಟೀಲ್, ಡಿವೈಎಸ್‌ಪಿ ರವಿಕುಮಾರ್ ನೇತೃತ್ವದ ತಂಡ ರಾಜೇಶ್ ಕುಮಾರ್ ಮನೆ ಮೇಲೆ ದಾಳಿ ನಡೆಸಿ, ಡೈರಿಯೊಂದನ್ನು ವಶಕ್ಕೆ ಪಡೆದಿದೆ.
ಈ ಡೈರಿಯಲ್ಲಿ ಬಿಬಿಎಂಪಿಯ ಎಂಜಿನಿಯರ್‌ಗಳು ಮತ್ತು ಹಿರಿಯ, ಕಿರಿಯ ಅಧಿಕಾರಿಗಳ ಹೆಸರನ್ನು ನೊಂದಾಯಿಸಿದ್ದು, ಯಾರಿಗೆ ಎಷ್ಟು ಹಣ ಕೊಡಲಾಗಿದೆ? ಕೊಡಬೇಕಿದೆ? ಎಂಬೆಲ್ಲ ಮಾಹಿತಿಯನ್ನು ಆರೋಪಿ ನಮೂದಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಡೈರಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಪರಿಶೀಲನೆ ನಡೆಯುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ 80 ಕೋಟಿ ರೂ.ಗೂ ಹೆಚ್ಚಿನ ಹಣದ ವಹಿವಾಟು ನಡೆದಿರುವುದು ಡೈರಿ ಮೂಲಕ ಪತ್ತೆಯಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಏಜೆಂಟ್-ಬ್ಯಾಂಕ್‌ಗೆ ಮಧ್ಯವರ್ತಿ: ಆರೋಪಿಯು ಸುಮಾರು ವರ್ಷಗಳಿಂದ ಟಿಡಿಆರ್ ಹಗರಣದ ಏಜೆಂಟ್‌ಗಳು ಹಾಗೂ ಶ್ರೀ ಬನಶಂಕರಿ ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ. ಆತ ಅನ್ಯ ವ್ಯಕ್ತಿಗಳ ಹೆಸರಿನಲ್ಲಿ ಖಾತೆಗಳನ್ನು ತೆರೆದು ಟಿಡಿಆರ್‌ಗೆ ಸಂಬಂಧಿಸಿದ ಚೆಕ್‌ಗಳನ್ನು ಹಾಕಿ ಹಣ ಡ್ರಾ ಮಾಡಿಕೊಡುತ್ತಿದ್ದ.
ಇದಕ್ಕೆ ಏಜೆಂಟ್‌ಗಳ ಮೂಲಕ ಇಂತಿಷ್ಟು ಕಮಿಷನ್ ಪಡೆಯುತ್ತಿದ್ದ. ಹೀಗಾಗಿ ಹಗರಣದಲ್ಲಿ ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಇದುವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ನಿರ್ದಿಷ್ಟ ಬ್ಯಾಂಕ್‌ನಿಂದ ಹಣ ವರ್ಗಾವಣೆಯಾದ ದಾಖಲೆಗಳನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಎಸಿಬಿ ಅಧಿಕಾರಿಯೊಬ್ಬರು ಹೇಳಿದರು.
ಹಾಗೇ ಶ್ರೀಬನಶಂಕರಿ ಮಹಿಳಾ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಭದ್ರತೆಗಾಗಿ ಇಡಲಾಗಿದ್ದ ಕೆಲ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿ ವಿವರಿಸಿದರು.