ಬೆಂಗಳೂರು: ಟಿಡಿಆರ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ಗುರುವಾರ ಹಲಸೂರು ಗೇಟ್ ಪೊಲೀಸ್ ಠಾಣೆ ಸಮೀಪದಲ್ಲಿರುವ ಶ್ರೀಬನಶಂಕರಿ ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ಮೇಲೆ ದಾಳಿ ನಡೆಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ವೊಂದರ ಮೇಲೆ ದಾಳಿ ನಡೆಸಲಾಗಿದೆ.
ಎಸಿಬಿ ಎಸ್ಪಿ ಸಂಜೀವ್ ಪಾಟೀಲ್, ಡಿವೈಎಸ್‌ಪಿ ರವಿಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ ಬೆಳಗ್ಗೆ 10 ಗಂಟೆಯಿಂದ ರಾತ್ರಿ 7 ಗಂಟೆವರೆಗೂ ಟಿಡಿಆರ್ ಹಗರಣ ಕುರಿತು ಹಣ ವರ್ಗಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ವಶಕ್ಕೆ ಪಡೆದುಕೊಂಡಿದೆ.
ದಾಳಿ ಸಂದರ್ಭದಲ್ಲಿ ನಗರದ ಕೆಲ ಮಧ್ಯವರ್ತಿಗಳು ಟಿಡಿಆರ್‌ಗೆ ಸೇರಿದ ದಾಖಲೆಗಳನ್ನು ಭದ್ರತೆಗಾಗಿ ಬ್ಯಾಂಕ್‌ನಲ್ಲಿ ಇಟ್ಟಿರುವುದು ಬೆಳಕಿಗೆ ಬಂದಿದೆ. ಹಾಗೆಯೇ ಕೆಲವರು ಕಟ್ಟಡ ಅಥವಾ ನಿವೇಶನ ಮಾಲೀಕರಿಂದ ಪಡೆದ ಚೆಕ್‌ಗಳನ್ನು ಬ್ಯಾಂಕ್‌ಗೆ ಹಾಕಿ ನಗದು ರೂಪದಲ್ಲಿ ಹಣ ಪಡೆದುಕೊಂಡು, ಖಾಲಿ ಖಾತೆ ಮಾಡಿಕೊಂಡಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ 50 ಕೋಟಿ ರೂ.ಗೂ ಅಧಿಕ ಹಣದ ವಹಿವಾಟು ನಡೆದಿದೆ ಎಂಬುದು ತಿಳಿದು ಬಂದಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಎಸಿಬಿ ಐಜಿಪಿ ಚಂದ್ರಶೇಖರ್, ಟಿಡಿಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನಲ್ಲಿ ವಹಿವಾಟು ನಡೆದಿದೆ. ಹೀಗಾಗಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಕೆಲ ಮಹತ್ವದ ದಾಖಲೆಗಳು ಪತ್ತೆಯಾಗಿದ್ದು, ಪರಿಶೀಲನೆ ಮುಂದುವರಿದಿದೆ. ಪ್ರಕರಣದ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಕೂಡ ಮುಂದುವರಿದಿದೆ ಎಂದರು.