Advertisement

ಎಸಿಬಿ ದುರ್ಬಳಕೆ: ಸಿಎಂ ರಾಜೀನಾಮೆಗೆ ಆಗ್ರಹ

10:20 AM Aug 21, 2017 | Team Udayavani |

ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಮೂಲಕ ಎಸಿಬಿ ದುರ್ಬಳಕೆ ಮಾಡಿಕೊಂಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ಯರು ನಗರದಲ್ಲಿ ರವಿವಾರ ಪ್ರತಿಭಟನೆ ನಡೆಸಿದರು. ನಗರದ ಸರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು
ಕೂಗಿದರಲ್ಲದೇ ಮುಖ್ಯಮಂತ್ರಿಗಳ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಡಿನೋಟಿಫಿಕೇಶನ ಸಂಬಂಧವಾಗಿ ಕೆಎಎಸ್‌ ಅಧಿಕಾರಿ ಎಚ್‌. ಬಸವರಾಜೇಂದ್ರ ಅವರಿಗೆ ಸುಳ್ಳು ಸಾಕ್ಷಿ ನೀಡುವಂತೆ ಬೆದರಿಕೆ ಹಾಗೂ ಒತ್ತಡ
ಹೇರಿರುವುದು ದುರ್ಬಳಕ್ಕೆ ಹಿಡಿದ ಕನ್ನಡಿಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಎಸಿಬಿಯನ್ನು ರಾಜ್ಯ ಸರ್ಕಾರ ತನ್ನ ದಾಳಕ್ಕೆ ತಕ್ಕ ಉಪಯೋಗಿಸುತ್ತಿದೆ ಎಂಬುದು ಮತ್ತೂಮ್ಮೆ ನಿರೂಪಿಸಿದಂತಾಗಿದೆ. ಇದನ್ನು ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹಾಗೂ ಶಾಸಕ ಬಿ.ಜಿ. ಪಾಟೀಲ ಮಾತನಾಡಿ, ಎಸಿಬಿಯನ್ನು ದುರ್ಬಳಕೆ ಮಾಡಿಕೊಂಡು ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಷಡ್ಯಂತ್ರ ರೂಪಿಸಿರುವುದಕ್ಕೆ ಪೂರಕವಾಗಿ ಕೆಎಎಸ್‌ ಅಧಿಕಾರಿ ಬಸವರಾಜೇಂದ್ರ ಅವರು ರಾಜ್ಯಪಾಲರು ಹಾಗೂ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಸುಳ್ಳು ಸಾಕ್ಷಿ ಹೇಳುವಂತೆ ಒತ್ತಡ ಹೇರುತ್ತಿದ್ದಾರೆ ಹಾಗೂ ಬೆದರಿಕೆ ಹಾಕುತ್ತಿದ್ದಾರೆ ಎಂದು ಪತ್ರ ಬರೆದಿರುವುದು ಎಸಿಬಿ ಹಾಗೂ ಮುಖ್ಯಮಂತ್ರಿಗಳ ಬಣ್ಣ ಬಯಲಾಗಿದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಸುನೀಲ ವಲ್ಲಾಪುರೆ, ರೇವು ನಾಯಕ ಬೆಳಮಗಿ, ಬಾಬುರಾವ ಚವ್ಹಾಣ, ಮಾಜಿ ಶಾಸಕರಾದ ಶಶೀಲ್‌ ಜಿ. ನಮೋಶಿ, ವಾಲ್ಮೀಕಿ ನಾಯಕ, ಪಕ್ಷದ ಮುಖಂಡರಾದ ಶಿವರಾಜ ಪಾಟೀಲ ರದ್ದೇವಾಡಗಿ, ಶಿವಶರಣಪ್ಪ ನಿಗ್ಗುಡಗಿ, ಶ್ಯಾಮರಾವ ಪ್ಯಾಟಿ, ನಾಮದೇವ
ರಾಠೊಡ, ಪ್ರಕಾಶ ಜಮಾದಾರ, ರವಿ ಬಿರಾದಾರ, ಬಸವರಾಜ ಮತ್ತಿಮಡು, ಸುಭಾಷ ಬಿರಾದಾರ, ಬಸವರಾಜ ಇಂಗಿನ್‌, ಸಾವಿತ್ರಿ ಕುಳಗೇರಿ, ಇಂದಿರಾ ಶಕ್ತಿ, ಶರಣಪ್ಪ ತಳವಾರ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next