Advertisement

ಮೂರ್‍ನಾಲ್ಕು ವರ್ಷಗಳಿಂದ ಎಸ್ಸಿ, ಎಸ್ಟಿ ಅನುದಾನ ಬಳಸಿಕೊಳ್ಳದ ಅಕಾಡೆಮಿ

10:46 PM Dec 24, 2019 | Lakshmi GovindaRaj |

ಬೆಂಗಳೂರು: ಪರಿಶಿಷ್ಟ ಜಾತಿ- ಪಂಗಡ ಸಮುದಾಯದ ಮಕ್ಕಳ ಶ್ರೇಯೋಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆ ಹಲವು ಯೋಜನೆಗಳನ್ನು ಜಾರಿಗೆ ತಂದು ಕಡ್ಡಾಯವಾಗಿ ಬಳಕೆ ಮಾಡಲೇಬೇಕೆಂದು ಸುತ್ತೋಲೆ ಹೊರಡಿಸಿದ್ದರೂ ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ಸಾಹಿತ್ಯ ಅಕಾಡೆಮಿ ಅನುದಾನ ಬಳಸಿಕೊಂಡಿಲ್ಲ. ಆದರೀಗ, ಅನುದಾನ ಬಳಕೆ ಕುರಿತು ಒಬ್ಬರ ಮೇಲೊಬ್ಬರು ಬೆಟ್ಟು ಮಾಡುತ್ತಿರುವ ಪ್ರಸಂಗ ಸೃಷ್ಟಿಯಾಗಿದೆ.

Advertisement

ಹೌದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ಸಾಹಿತ್ಯ ಅಕಾಡೆಮಿ ಪರಿಶಿಷ್ಟರ ಕಲ್ಯಾಣಕ್ಕಾಗಿ ಸರ್ಕಾರ ನೀಡಿರುವ ಲಕ್ಷಾಂತರ ರೂ. ಅನುದಾನವನ್ನು ಕಳೆದ 3-4 ವರ್ಷಗಳಿಂದ ಬಳಸದೇ ಹಾಗೆಯೇ ಉಳಿಸಿ ಕೊಂಡಿರುವುದು ಬೆಳಕಿಗೆ ಬಂದಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿಯೇ ವಿಶೇಷವಾಗಿ ರೂಪಿಸಿರುವ ಯೋಜನೆಗಳ ಅನುದಾನವನ್ನು ಶೇ.100ರಷ್ಟು ಖರ್ಚು ಮಾಡಲೇಬೇಕೆಂಬ ನಿಯಮವನ್ನು ಸರ್ಕಾರ ರೂಪಿಸಿದ್ದರೂ ಇಲ್ಲಿ ಅದು ಪಾಲನೆಯಾಗಿಲ್ಲ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ಪ್ರಾಧಿಕಾರ ಮತ್ತು ಅಕಾಡೆಮಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರತಿ ವರ್ಷ ಲಕ್ಷಾಂತರ ರೂ.ಗಳನ್ನು ವಿಶೇಷ ಘಟಕ ಯೋಜನೆಯಡಿ ನೀಡುತ್ತದೆ. ಈ ಅನುದಾನವನ್ನು ಅಕಾಡೆಮಿ ಹಾಗೂ ಪ್ರಾಧಿಕಾರಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿಯೇ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಬಳಸಬೇಕು. ಆದರೆ, ಆ ಕೆಲಸ ನಡೆದಿಲ್ಲ. ಈ ಅನುದಾನ ಬಳಕೆಯಾಗದ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ತಾಂತ್ರಿಕ ಕಾರಣಗಳನ್ನು ನೀಡುತ್ತಾರೆ. ಅಲ್ಲದೆ ಈ ಹಿಂದಿನ ಅಕಾಡೆಮಿ ಹಾಗೂ ಪ್ರಾಧಿಕಾರದ ಅಧ್ಯಕ್ಷರತ್ತ ಬೆಟ್ಟು ಮಾಡುತ್ತಾರೆ.

ಲಲಿತ ಕಲಾ ಅಕಾಡೆಮಿಯಲ್ಲಿದೆ ಅನುದಾನ: ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದವರ ಕಲೆ ಬೆಳವಣಿಗೆಗಾಗಿಯೇ ಸಮಾಜ ಕಲ್ಯಾಣ ಇಲಾಖೆ ಲಲಿತಕಲಾ ಅಕಾಡೆಮಿಗೆ ಪ್ರತಿ ವರ್ಷ ತಲಾ 5 ಲಕ್ಷ ರೂ.ಅನುದಾನ ನೀಡುತ್ತದೆ. ಈ ಅನುದಾನವನ್ನು ಪರಿಶಿಷ್ಟ ಸಮುದಾಯದ ಮಕ್ಕಳ ವಿಶೇಷ ಕಾರ್ಯಾಗಾರ ಸೇರಿ ಇನ್ನಿತರ ಕಾರ್ಯಕ್ರಮ ರೂಪಿಸಲು ಬಳಸಿಕೊಳ್ಳಬೇಕು. ಆದರೆ ಈ ಅನುದಾನ ಹಾಗೆಯೇ ಉಳಿದಿದೆ.

ಸುಮಾರು 30 ಲಕ್ಷ ರೂ.ಅನುದಾನ ಈ ಅಕಾಡೆಮಿಯಲ್ಲಿದೆ. ಈ ಬಗ್ಗೆ ಮಾತನಾಡಿದ ಅಕಾಡೆಮಿಯ ಹಿರಿಯ ಅಧಿಕಾರಿಯೊಬ್ಬರು ಈ ಹಿಂದೆ ಅಧಿಕಾರದಲ್ಲಿದ್ದ ಅಧ್ಯಕ್ಷರು ಈ ಬಗ್ಗೆ ಗಮನ ಹರಿಸಬೇಕಾಗಿತ್ತು. ಪರಿಶಿಷ್ಟ ವರ್ಗದವರ ಕಲ್ಯಾಣಕ್ಕಾಗಿ ಯೋಜನೆ ರೂಪಿಸಬೇಕಾಗಿತ್ತು. ಆದರೆ ಆ ಕೆಲಸವಾಗಿಲ್ಲ. ಹೀಗಾಗಿಯೇ ಅನುದಾನ ಹಾಗೆಯೇ ಉಳಿದು ಕೊಂಡಿದೆ ಎಂದು ಹೇಳಿದ್ದಾರೆ.

Advertisement

ಸಾಹಿತ್ಯ ಅಕಾಡೆಮಿಯಲ್ಲಿದೆ 50 ಲಕ್ಷ ರೂ.: ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿಯೂ ಈ ಅನುದಾನವನ್ನು ಸರಿಯಾಗಿ ಬಳಸಿಕೊಂಡಿಲ್ಲ. ಹೀಗಾಗಿಯೇ ಸುಮಾರು 50 ಲಕ್ಷ ರೂ.ಹಾಗೆಯೇ ಇದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಹಾಲಿ ಅಧ್ಯಕ್ಷ ಬಿ.ವಿ.ವಸಂತ ಕುಮಾರ್‌, ಕೆಲವು ತಾಂತ್ರಿಕ ಕಾರಣಗಳಿಂದಾಗಿ ಈ ಅನುದಾನ ಬಳಕೆಯಾಗಿಲ್ಲ. ಹಾಲಿ ಆಡಳಿತ ಮಂಡಳಿ ಕಮ್ಮಟ ಮತ್ತು ಕಾರ್ಯಾಗಾರ ಹಮ್ಮಿಕೊಂಡು ಈ ಅನುದಾನ ಸದ್ಬಳಕೆ ಮಾಡಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ಭಟ್ಕಳದಲ್ಲಿ ಆದಿವಾಸಿ ಮಕ್ಕಳಿಗೆ ಕ್ಯಾಂಪ್‌: “ಸರ್ಕಾರ ನೀಡಿರುವ ಅನುದಾನವನ್ನು ಬಳಕೆ ಮಾಡಿಕೊಳ್ಳುವತ್ತ ಈಗಿನ ಸದಸ್ಯ ಮಂಡಳಿ ಮುುಂದಾಗಿದೆ. ಈ ಬಗ್ಗೆ ಕಲಾವಿದರ ಜಿಲ್ಲಾವಾರು ಸಭೆ ಕರೆದು ಚರ್ಚಿಸಲಾಗುವುದು’ ಎಂದು ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ಸ್ಪಷ್ಟಪಡಿಸಿದ್ದಾರೆ. ಆದಿವಾಸಿ ಮಕ್ಕಳಿಗಾಗಿ ಭಟ್ಕಳದಲ್ಲಿ ಮತ್ತು ಪರಿಶಿಷ್ಟ ಸಮುದಾ ಯದವರ ಮಕ್ಕಳಿಗಾಗಿ ಚಾಮರಾಜ ನಗರದಲ್ಲಿ ಶೀಘ್ರದಲ್ಲೇ ಚಿತ್ರಕಲಾ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗುವುದು. ಜತೆಗೆ ಸರ್ಕಾರದ ಯೋಜನೆಗಳನ್ನು ಆಯಾ ಸಮುದಾಯದ ಕೈ ಸೇರು ವಂತೆ ಮಾಡುವುದು ಅಕಾಡೆಮಿ ಉದ್ದೇಶವಾಗಿದೆ ಎಂದರು.

ಪರಿಶಿಷ್ಟರ ಕಲ್ಯಾಣಕ್ಕಾಗಿಯೇ ವಿವಿಧ ಅಕಾಡೆಮಿಗಳಿಗೆ ಸರ್ಕಾರ ನೀಡಿರುವ ಲಕ್ಷಾಂತರ ರೂ. ಅನುದಾನ ಬಳಕೆ ಆಗದೇ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಬಳಕೆಯಾಗದೇ ಇದ್ದರೆ ಆ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳಲು ಗಮನ ಹರಿಸಲಾಗುವುದು.
-ಎಸ್‌.ರಂಗಪ್ಪ, ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next