ಹೊಸದಿಲ್ಲಿ: ವಿದೇಶಿ ವಿಶ್ವವಿದ್ಯಾನಿಲಯಗಳು ಭಾರತದಲ್ಲಿ ತಮ್ಮ ಕ್ಯಾಂಪಸ್ ಆರಂಭಿಸಲು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಹಸುರು ನಿಶಾನೆ ತೋರಿದೆ. ಇದಕ್ಕೆ ಸಂಬಂಧಿಸಿದ ಕರಡು ನಿಯಮಗಳನ್ನು ಯುಜಿಸಿ ಗುರುವಾರ ಬಿಡುಗಡೆಗೊಳಿಸಿದೆ.
ಇದರ ಪ್ರಕಾರ ಪ್ರವೇಶ ಪ್ರಕ್ರಿಯೆ, ಶುಲ್ಕವನ್ನು ವಿದೇಶಿ ವಿ.ವಿ.ಗಳೇ ನಿರ್ಧರಿಸಲು ಅವಕಾಶ ನೀಡಲಾಗಿದೆ.
ಯುಜಿಸಿ ನಿಬಂಧನೆಗಳ ಪ್ರಕಾರ ವಿದೇಶಿ ವಿ.ವಿ.ಗಳಿಂದ ಪೂರ್ಣಾವಧಿ ಆಫ್ಲೈನ್ ಕೋರ್ಸ್‌ಗೆ ಮಾತ್ರ ಅವಕಾಶವಿದೆ. ಆನ್‌ಲೈನ್ ಮತ್ತು ದೂರ ಶಿಕ್ಷಣ ಕೋರ್ಸ್‌ಗಳಿಗೆ ಅವಕಾಶವಿಲ್ಲ. ಆರಂಭಿಕ ಹಂತದಲ್ಲಿ 10 ವರ್ಷಗಳಿಗೆ ಅನುಮೋದನೆ ನೀಡಲಾಗುತ್ತದೆ. ಅನಂತರ 9ನೇ ವರ್ಷದಲ್ಲಿ ವಿಧಿಸಿದ್ದ ಎಲ್ಲ ಷರತ್ತುಗಳನ್ನು ಪೂರೈಸಿದ್ದರೆ ಅನುಮೋದನೆ ನವೀಕರಣಗೊಳ್ಳಲಿದೆ.
ಈ ಶಿಕ್ಷಣ ಸಂಸ್ಥೆಗಳು ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ಮತ್ತು ಇಲ್ಲಿನ ಉನ್ನತ ಶಿಕ್ಷಣದ ಗುಣಮಟ್ಟಕ್ಕೆ ಧಕ್ಕೆ ತರುವಂತಹ ಯಾವುದೇ ಅಧ್ಯಯನ ಕೋರ್ಸ್‌ಗಳನ್ನು ಆರಂಭಿಸುವಂತಿಲ್ಲ. ಪ್ರಸ್ತುತ ಈ ಕುರಿತು ಪ್ರಸ್ತಾವ ಹೊರಡಿಸಲಾಗಿದ್ದು, ಇದಕ್ಕೆ ಬರುವ ಪ್ರತಿಕ್ರಿಯೆಗಳನ್ನು ಪರಿಗಣಿಸಿ ಅಂತಿಮ ನಿಬಂಧನೆಗಳನ್ನು ಹೊರಡಿಸಲಾಗುವುದು ಎಂದು ಯುಜಿಸಿ ಅಧ್ಯಕ್ಷ ಎಂ. ಜಗದೀಶ್ ಕುಮಾರ್ ತಿಳಿಸಿದ್ದಾರೆ.