ಲಿಂಗಸುಗೂರು: ಸಹಾಯಕ ಆಯುಕ್ತ ಎಂ.ಪಿ. ಮಾರುತಿ ಅವರು ನೀಡಿದ ಭರವಸೆ ಮೇರೆಗೆ ಪಟ್ಟಣದ ಎಸಿ ಕಚೇರಿ ಬಳಿ ಕಳೆದ ಐದು ದಿನಗಳಿಂದ ವಿವಿಧ ಬೇಡಿಕೆ ಈಡೇರಿಕೆಗಾಗಿ ದಸಂಸ ಕಾರ್ಯಕರ್ತರು ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಅಂತ್ಯಗೊಂಡಿದೆ.
ಸುಮಾರು 30ಕ್ಕೂ ಅಧಿಕ ಪ್ರಮುಖ ಸಮಸ್ಯೆ ಮುಂದಿಟ್ಟುಕೊಂಡು ದಸಂಸ(ಪ್ರೊ| ಕೃಷ್ಣಪ್ಪ ಬಣ) ಕಾರ್ಯಕರ್ತರು ನಡೆಸುತ್ತಿದ್ದ ಅನಿಷ್ಟಾವಧಿ ಧರಣಿ ಸತ್ಯಾಗ್ರಹ ಶುಕ್ರವಾರ ಐದನೇ ದಿನಕ್ಕೆ ಕಾಲಿರಿಸಿತ್ತು. ಹೋರಾಟಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ದಸಂಸ ಕಾರ್ಯಕರ್ತರು ಕಚೇರಿ ಮುಖ್ಯರಸ್ತೆ ತಡೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಸಿಪಿಐ ವಿ.ಎಸ್. ಹಿರೇಮಠ ಅವರು ನೀವು ಏಕಾಏಕಿಯಾಗಿ ರಸ್ತೆ ತಡೆ ಮಾಡುವುದರಿಂದ ಕಚೇರಿಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಧರಣಿ ಸ್ಥಳಕ್ಕೆ ನಡೆಯರಿ. ಅಧಿಕಾರಿಗಳು ಅಲ್ಲಿಗೆ ಬರುತ್ತಾರೆ. ಅಲ್ಲಿ ಸಮಸ್ಯೆಗಳ ಬಗ್ಗೆ ಚರ್ಚಿಸೋಣ ಎಂದು ಮನವೋಲಿಸಿದರು. ಇದಕ್ಕೆ ಜಗ್ಗದ ಕಾರ್ಯಕರ್ತರು ಅಧಿಕಾರಿಗಳು ಬಂದು ಸಮಸ್ಯೆ ಆಲಿಸುವರೆಗೂ ರಸ್ತೆಬಿಟ್ಟು ಅಗಲಲ್ಲ ಎಂದು ಪಟ್ಟುಹಿಡಿದರು.
ಸಹಾಯಕ ಆಯುಕ್ತ ಎಂ.ಪಿ.ಮಾರುತಿ, ತಹಶೀಲ್ದಾರ ಚಾಮರಾಜ ಪಾಟೀಲ ಬಂದ ನಂತರ ರಸ್ತೆ ತಡೆ ಕೈಬಿಟ್ಟು ಧರಣಿ ಸ್ಥಳಕ್ಕೆ ವಾಪಸ್ಸು ಬಂದರು. ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಹನುಮಂತಪ್ಪ ವೆಂಕಟಾಪುರ, ಚಿನ್ನಪ್ಪ ಕಂದಳಿ ಮಾತನಾಡಿ, ಅನೇಕ ವರ್ಷಗಳಿಂದ ದಲಿತರು ಮೂಲ ಸೌಕರ್ಯಗಳು ಇಲ್ಲದೆ ಪರದಾಡುತ್ತಿದ್ದಾರೆ. ಕೆಲವಡೆ ಸಶ್ಮಾನ ಇಲ್ಲದೇ ತೊಂದರೆ ಪಡುವಂತಾಗಿದೆ. ದಲಿತರಿಗಾಗಿ ಬಂದ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಳಕೆ ಮಾಡಲಾಗುತ್ತಿದೆ. 30 ಬೇಡಿಕೆ ಇತ್ಯರ್ಥಕ್ಕೆ ದಲಿತ ಮುಖಂಡರ ಸಮ್ಮುಖದಲ್ಲಿ ಸಂಬಂಧಪಟ್ಟ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆಗೆ ದಿನಾಂಕ ನಿಗದಿ ಮಾಡುವಂತೆ ಒತ್ತಾಯಿಸಿದರು.
ಇದಕ್ಕೆ ಒಪ್ಪಿದ ಸಹಾಯಕ ಆಯುಕ್ತರು ಫೆ. 8ರಂದು ಸಭೆ ಕರೆಯುವುದಾಗಿ ಭರವಸೆ ನೀಡಿದ ನಂತರ ಧರಣಿ ಹಿಂಪಡೆಯಲಾಯಿತು.