Advertisement

ಕುಂದಾಪುರ: ನಿರ್ಗಮಿತ ಎಸಿ ಡಾ|ಮಧುಕೇಶ್ವರ್‌ ಸರಕಾರಿ ನಿವಾಸಕ್ಕೆ ಎಸಿಬಿ ದಾಳಿ

09:58 AM Sep 20, 2019 | sudhir |

ಕುಂದಾಪುರ : ವರ್ಗಾವಣೆಯಾಗಿದ್ದರೂ ಕಡತ ವಿಲೇವಾರಿ ನಡೆಸಿ, ಲಂಚಕ್ಕಾಗಿ ಬೇಡಿಕೆಯಿಟ್ಟಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಕುಂದಾಪುರ ಉಪ ವಿಭಾಗದ ನಿರ್ಗಮಿತ ಸಹಾಯಕ ಆಯುಕ್ತ, ಕೆಎಎಸ್‌ ಶ್ರೇಣಿಯ ಹಿರಿಯ ಅಧಿಕಾರಿ ಡಾ| ಎಸ್‌.ಎಸ್‌. ಮಧುಕೇಶ್ವರ್‌ ಅವರು ವಾಸ್ತವ್ಯವಿದ್ದ ಸರಕಾರಿ ನಿವಾಸದ ಮೇಲೆ ಉಡುಪಿ ಠಾಣೆಯ ಭ್ರಷ್ಟಚಾರ ನಿಗ್ರಹ ದಳ (ಎಸಿಬಿ)ದ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ.

Advertisement

ಈ ವೇಳೆ 1.28 ಲಕ್ಷ ರೂ. ನಗದು ಹಾಗೂ ವಿಲೇವಾರಿಗೆ ಬಾಕಿ ಇದ್ದ 23 ಕಡತಗಳು, ರಿಜಿಸ್ಟರ್‌ಗಳು ಸಿಕ್ಕಿದ್ದು, ಅವುಗಳನ್ನು ಎಸಿಬಿ ಪೊಲೀಸರು ವಶಪಡಿಸಿಕೊಂಡಿದ್ದು, ಅವುಗಳ ಪರಿಶೀಲನೆ ನಡೆಸಿದ್ದಾರೆ.
ಭೂ ವ್ಯಾಜ್ಯಕ್ಕೆ ಸಂಬಂಧಿಸಿದ ಕಡತ ವಿಲೇವಾರಿ ಮಾಡುತ್ತಿದ್ದಾಗ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪದ ಹಿನ್ನೆಲೆಯಲ್ಲಿ ಭ್ರಷ್ಟಚಾರ ನಿಗ್ರಹ ದಳ (ಎಸಿಬಿ)ದ ಎಸ್ಪಿ ಸುಧೀರ್‌ ಹೆಗ್ಡೆ ಮಾರ್ಗದರ್ಶನದಲ್ಲಿ ಉಡುಪಿ ವಿಭಾಗದ ಡಿವೈಎಸ್‌ಪಿ ಮಂಜುನಾಥ್‌ ಕವರಿ ನೇತೃತ್ವದಲ್ಲಿ ದಾಳಿ ನಡೆದಿದೆ.

2 ದಿನಗಳ ಹಿಂದೆ ವರ್ಗ
ಡಾ| ಮಧುಕೇಶ್ವರ್‌ ಅವರು ಸೆ. 16 ರಂದು ವರ್ಗಾವಣೆಗೊಂಡಿದ್ದು, ಆದರೆ ಯಾವುದೇ ಹುದ್ದೆಗೆ ನಿಯೋಜನೆಗೊಂಡಿರಲಿಲ್ಲ. ಸೆ. 17 ರಂದು ರಾಜು ಕೆ. ಅವರು ಉಪ ವಿಭಾಗದ ಸಹಾಯಕ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು.

ವರ್ಗಾವಾದರೂ ವಿಲೇವಾರಿ
ಮಧುಕೇಶ್ವರ್‌ ಅವರು ವರ್ಗವಾಗಿದ್ದರೂ, ಭೂ ವ್ಯಾಜ್ಯಕ್ಕೆ ಸಂಬಂಧಿಸಿದ ಕಡತ ವಿಲೇವಾರಿಯ ಪ್ರಕರಣವೊಂದಕ್ಕೆ 25 ಸಾವಿರದಿಂದ 1 ಲಕ್ಷ ರೂ. ಲಂಚ ಪಡೆದು ಆದೇಶ ತಯಾರಿಸಿ, ವರ್ಗವಾಗುವ ಹಿಂದಿನ ದಿನಕ್ಕೆ ನಮೂದಿಸಿ ಕಡತಕ್ಕೆ ಅಕ್ರಮ ಸಹಿ ಮಾಡುತ್ತಿದ್ದಾರೆ ಎನ್ನುವುದಾಗಿ ಎಸಿಬಿಗೆ ಸಾರ್ವಜನಿಕರಿಂದ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಬುಧವಾರ ನ್ಯಾಯಾಲಯದ ಅನುಮತಿ ಪಡೆದಿದ್ದು, ಗುರುವಾರ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಎಸಿಬಿ ಅಧಿಕಾರಿಗಳು ಕುಂದಾಪುರಕ್ಕೆ ಆಗಮಿಸಿದ್ದು, ಆದರೆ ಡಾ| ಮಧುಕೇಶ್ವರ್‌ ಅವರು ಇಲ್ಲಿಲ್ಲದ ಕಾರಣ, ಬೇರೆ ಕಡೆ ಅವರಿಗಾಗಿ ಕಾಯುತ್ತಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಸರಕಾರಿ ನಿವಾಸಕ್ಕೆ ಬರುತ್ತಿದ್ದಂತೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

Advertisement

ಎಸಿ ಮೇಲೆ ಮೊದಲ ದಾಳಿ
ಕುಂದಾಪುರದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸಹಾಯಕ ಆಯುಕ್ತರಾಗಿದ್ದ ಅಧಿಕಾರಿಗಳ ಮೇಲೆ ಎಸಿಬಿ ಅಥವಾ ಲೋಕಾಯುಕ್ತದಂತಹ ಭ್ರಷ್ಟಚಾರ ನಿಯಂತ್ರಣ ಸಂಸ್ಥೆಯಿಂದ ದಾಳಿ ನಡೆದಿದೆ. ಇದಕ್ಕೂ ಮೊದಲು ತಹಶೀಲ್ದಾರ್‌ ಹಾಗೂ ಅವರಿಗಿಂತ ಕೆಳಗಿನ ಸ್ತರದ ಅಧಿಕಾರಿಗಳ ಮೇಲೆ ದಾಳಿ ನಡೆದಿತ್ತು.

ಎಸಿಬಿ ಎಸ್‌ಐ ಸತೀಶ್‌ ಹಾಗೂ ಸಿಬಂದಿ ದಾಳಿ ನಡೆಸಿದ ತಂಡದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next