Advertisement

ಗಣಿಗಾರಿಕೆ ಪ್ರದೇಶಗಳಿಗೆ ಎಸಿ, ಡಿವೈಎಸ್‌ಪಿ ಭೇಟಿ

11:56 AM Feb 24, 2021 | Team Udayavani |

ದೇವನಹಳ್ಳಿ: ತಾಲೂಕಿನ ತೈಲಗೆರೆ, ಮೀಸಗಾನಹಳ್ಳಿ ಗ್ರಾಮಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆ ಪ್ರದೇಶಗಳಿಗೆ ಉಪವಿಭಾಗಾಧಿಕಾರಿ, ಪೊಲೀಸ್‌ ಇಲಾಖೆಯ ಡಿವೈಎಸ್‌ಪಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಶಿವಮೊಗ್ಗ ಜಿಲ್ಲೆಯ ಹುಣಸೋಡು ಹಾಗೂ ಚಿಕ್ಕಬಳ್ಳಾಪುರದ ಹಿರೇನಾಗವಲ್ಲಿ ಗ್ರಾಮದಲ್ಲಿ ಜಿಲೆಟಿನ್‌ ಕಡ್ಡಿ ಸ್ಫೋಟದಿಂದ ಸಾವನ್ನಪ್ಪಿದ್ದ ಬೆನ್ನಲ್ಲೇ ಉಪವಿಭಾಗಾಧಿಕಾರಿ, ಪೊಲೀಸ್‌ ಡಿವೈಎಸ್‌ಪಿ ನೇತೃತ್ವದಲ್ಲಿ ಗಣಿಗಾರಿಕೆ ಮಾಡುವ ಪ್ರದೇಶಗಳಿಗೆ ಭೇಟಿ ನೀಡಿ ಪರವಾನಗಿ ಇದೆಯೋ, ಇಲ್ಲವೋ ಹಾಗೂ ಎಷ್ಟು ಪ್ರಮಾಣದಲ್ಲಿ ಸ್ಫೋಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಕಲೆ ಹಾಕಿದರು.

ಸಾಮಾಜಿಕ ಕಾರ್ಯಕರ್ತ ಕೊಯಿರಾ ಚಿಕ್ಕೇಗೌಡ ಮಾತನಾಡಿ, ನಾಮಕಾವಸ್ಥೆಗೆ ಟಾಸ್ಕ್ ಪೋರ್ಸ್‌ ಕಮಿಟಿ ನೆಪದಲ್ಲಿ ಅಧಿಕಾರಿಗಳು ಪರಿಶೀಲನೆಗೆ ಬಂದಿದ್ದಾರೆ. ಹಲವಾರು ವರ್ಷಗಳಿಂದ ನಿರಂತರವಾಗಿ ಗಣಿಗಾರಿಕೆ ನಡೆಯುತ್ತಿದೆ. ಸಿಎಂ ಬಿಎಸ್‌ವೈ ಅವರು ಅಕ್ರಮ ಇರುವುದನ್ನು ಸಕ್ರಮ ಮಾಡುತ್ತೇವೆ ಎಂಬ ಹೇಳಿಕೆ ನೀಡುತ್ತಾರೆ.

ಶಿವಮೊಗ್ಗ ಜಿಲ್ಲೆಯ ಹುಣಸೋಡು ಹಾಗೂ ಚಿಕ್ಕಬಳ್ಳಾಪುರದ ಹಿರೇನಾಗವಲ್ಲಿ ಸಂಭವಿಸಿದ ಘಟನೆ ಮುಂದೊಂದು ದಿನ ದೇವನಹಳ್ಳಿಯಲ್ಲೂ ಸಂಭವಿಸಿ ಅಮಾಯಕರು ಪ್ರಾಣ ಕಳೆದುಕೊಳ್ಳಬಹುದು. ಆದ್ದರಿಂದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತರ ಬೆಳೆ ಹಾನಿ: ಕಲ್ಲು ಗಣಿಗಾರಿಕೆಯಿಂದ ರೈತರ ಬೆಳೆಗಳು ನಷ್ಟವಾಗಿವೆ. ಅಧಿಕಾರಿಗಳು ಕಾಟಾಚಾರಕ್ಕೆ ಬಂದು ಹೋದರೆ ಸಾಲದು. ಸರಿಯಾದ ಕ್ರಮ ಕೈಗೊಳ್ಳಬೇಕು. 2020 ಜನವರಿ 10ರಂದು ಕಾರಹಳ್ಳಿ ಸಭೆಯಲ್ಲಿ ನಿರ್ಣಯಗೊಂಡು ಗಣಿಗಾರಿಕೆ ನಡೆಸುವವರಿಗೆ ನೋಟಿಸ್‌ ನೀಡಲಾಗಿತ್ತು. ಸಭೆಯ ನಿರ್ಣಯದ ಪ್ರತಿಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಜಿಲ್ಲಾಧಿಕಾರಿ,ಕರ್ನಾಟಕ ಗೃಹ ಮಂಡಳಿ ಮತ್ತು ಪರಿಸರಇಲಾಖೆಗೆ ರವಾನಿಸಿದರೂ ಯಾವುದೇಪ್ರಯೋಜನವಾಗಿಲ್ಲ. ಸ್ಥಳೀಯ ಸರ್ಕಾರವೆಂದೇ ಬಿಂಬಿತವಾಗಿರುವ ಗ್ರಾಪಂ ನಿರ್ಣಯಕ್ಕೂಬೆಲೆಯೇ ಇಲ್ಲ ಎಂದು ಅಧಿಕಾರಿಗಳ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Advertisement

ಉಪವಿಭಾಗಾಧಿಕಾರಿ ಅರುಳ್‌ಕುಮಾರ್‌ ಮಾತನಾಡಿ, ಜಿಲ್ಲಾಧಿಕಾರಿ ಆದೇಶದಂತೆ ಟಾಸ್ಕ್ ಪೋರ್ಸ್‌ ಸಮಿತಿ ಮಾಡಿದ್ದು, ಇದರಲ್ಲಿ ಡಿವೈಎಸ್‌ಪಿ, ವೃತ್ತ ನಿರೀಕ್ಷಕರು, ತಹಶೀಲ್ದಾರ್‌,ಬೆಸ್ಕಾಂ, ಅರಣ್ಯ, ಪರಿಸರ ಇಲಾಖೆ, ಗಣಿ ಮತ್ತುಭೂ ವಿಜ್ಞಾನ ಇಲಾಖೆ ಒಳಗೊಂಡಂತೆ ಸಮಿತಿಮಾಡಿದೆ ಎಂದರು. ಡಿವೈಎಸ್‌ಪಿ ರಂಗಪ್ಪ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ರಶ್ಮೀವೇಣುಗೋಪಾಲ್‌, ತಹಶೀಲ್ದಾರ್‌ ಅನಿಲ್‌ ಕುಮಾರ್‌ ಅರೋಲಿಕರ್‌, ತಾಪಂ ಇಒ ಎಚ್‌.ಡಿ. ವಸಂತಕುಮಾರ್‌, ವೃತ್ತ ನಿರೀಕ್ಷಕ ಮಲ್ಲಿಕಾರ್ಜುನ್‌, ವಿಶ್ವನಾಥಪುರ ಪಿಎಸ್‌ಐ ರಘು ಇದ್ದರು.

ಪರವಾನಗಿ ಇಲ್ಲದವರ ವಿರುದ್ಧ ಕ್ರಮ :

ಜಿಲ್ಲಾಧಿಕಾರಿಗೆ ಇಲ್ಲಿ ನಡೆಯುತ್ತಿರುವ ಗಣಿಗಾರಿಕೆ ಸಂಬಂಧಪಟ್ಟಂತೆ ವರದಿ ನೀಡಬೇಕಾಗಿದೆ. ಎಷ್ಟು ಗಣಿಗಾರಿಕೆ ನಡೆಯುತ್ತಿದೆ. ಎಷ್ಟರಮಟ್ಟದಲ್ಲಿ ಸ್ಫೋಟಗೊಳ್ಳುತ್ತಿದೆ. ಪರವಾನಗಿ ಇರುವವರು ತಮ್ಮ ದಾಖಲಾತಿ ತರಲು ತಿಳಿಸಲಾಗಿದೆ. ಸ್ಫೋಟಕ ವಸ್ತುಗಳನ್ನು ಎಲ್ಲಿ ದಾಸ್ತಾನು ಮಾಡಿದ್ದಾರೆ. ಪರಿಸರ ಇಲಾಖೆಯಿಂದ ಸ್ಫೋಟಗೊಳಿಸಲು ಅನುಮತಿ ಪಡೆದಿದ್ದಾರೋ ಇಲ್ಲವೋ, ಹೀಗೆ ಎಲ್ಲ ಅಂಶಗಳನ್ನು ಕ್ರೋಢಿಕರಿಸಲಾಗುತ್ತಿದೆ. ಗಣಿಗಾರಿಕೆ ಪರವಾನಗಿ ಇಲ್ಲದವರ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಉಪವಿಭಾಗಾಧಿಕಾರಿ ಅರುಳ್‌ಕುಮಾರ್‌ ಎಚ್ಚರಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next