ಪುಣೆ : ಇಲ್ಲಿನ ಸಾವಿತ್ರಿ ಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಎಬಿವಿಪಿ ಮತ್ತು ಎಸ್‌ಎಫ್ಐ ಕಾರ್ಯಕರ್ತರು ಪೋಸ್ಟರ್ ವಿಷಯದಲ್ಲಿ ಹೊಡೆದಾಡಿಕೊಂಡ ಕಾರಣ ವಿವಿ ಆವರಣದಲ್ಲೀಗ ಉದ್ರಿಕ್ತ ಸ್ಥಿತಿ ನೆಲೆಗೊಂಡಿದೆ.
ಎರಡೂ ಬಣಗಳು ಪೊಲೀಸ್ ಠಾಣೆಗೆ ಬಂದ ಪರಸ್ಪರರ ವಿರುದ್ಧ ದೂರು ಕೊಡಲು ಮುಂದಾಗಿವೆ. ದೂರು ದಾಖಲಿಸುವ ಪ್ರಕ್ರಿಯೆ ಈಗ ಸಾಗಿದೆ ಎಂದು ಚತುಶೃಂಗಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
“ಎಬಿವಿಪಿ ಮುರ್ದಾಬಾದ್’ ಎಂಬ ಪೋಸ್ಟರ್‌ಗಳನ್ನು ವಿವಿ ಕ್ಯಾಂಪಸ್ ಒಳಗೆ ಎಸ್‌ಎಫ್ಐ ಸದಸ್ಯರು ಹಚ್ಚುತ್ತಿದ್ದರು ಎಂದು ಎಬಿವಿಪಿ ಕಾರ್ಯಕರ್ತ ಪ್ರದೀಪ್ ಗಾವಡೆ ದೂರಿದ್ದಾರೆ. “ಎಸ್‌ಎಫ್ಐ ಸದಸ್ಯರು ಈ ರೀತಿಯ ಪೋಸ್ಟರ್ ಹಾಕುವುದನ್ನು ನಾವು ಆಕ್ಷೇಪಿಸಿ ಪ್ರತಿಭಟಿಸಿದಾಗ ಅವರು ನಮಗೆ ಬೆದರಿಕೆ ಹಾಕಿ ನಮ್ಮ ಮೇಲೆ ದಾಳಿ ನಡೆಸಿದರು’ ಎಂದು ಗಾವಡೆ ದೂರಿದ್ದಾರೆ.
“ದಿಲ್ಲಿ ರಾಮ್‌ಜಾಸ್ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮಕ್ಕೆ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲೀದ್‌ನನ್ನು ಆಹ್ವಾನಿಸಲಾಗಿತ್ತು. ಅದನ್ನು ಎಬಿವಿಪಿ ತೀವ್ರವಾಗಿ ಪ್ರತಿಭಟಿಸಿದ್ದರಿಂದ ಅಲ್ಲಿ ಮಾರಾಮಾರಿ ಉಂಟಾಗಿತ್ತು. ಇದನ್ನು ಪ್ರತಿಭಟಿಸಲು ಪುಣೆ ವಿವಿಯಲ್ಲಿ ಎಎಸ್‌ಎಫ್ ಕಾರ್ಯಕರ್ತರು “ಎಬಿವಿಪಿ ಮುರ್ದಾಬಾದ್’ ಎಂಬ ಪೋಸ್ಟರ್‌ಗಳನ್ನು ಹಚ್ಚಿದ್ದಾರೆ’ ಎಂದು ಗಾವಡೆ ಹೇಳಿದರು.
“ನಾವು ಎಸ್‌ಎಫ್ಐ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಲ್ಲ; ಅವರೇ ನಮ್ಮನ್ನು ಹೊಡೆದಿದ್ದಾರೆ’ ಎಂದು ಗಾವಡೆ ದೂರಿದರು.
ಪುಣೆ ವಿವಿ ಮಾರಾಮಾರಿಯಲ್ಲಿ ಭಾಗಿಯಾಗಿರದ ಎಸ್‌ಎಫ್ಐ ಕಾರ್ಯಕತರರ ಮಾವೋ ಚವಾಣ್ ಅವರು “ಸೋಲಾಪುರ ಎಂಎಲ್‌ಸಿ ಪ್ರಶಾಂತ್ ಪರಿಚಾರಕ್ ಅವರು ಸೈನಿಕರನ್ನು ಅವಹೇಳನ ಮಾಡುವ ರೀತಿಯ ಹೇಳಿಕೆ ನೀಡಿರುವುದನ್ನು ಹಾಗೂ ದಿಲ್ಲಿಯ ರಾಮಜಾಸ್ ಕಾಲೇಜಿನಲ್ಲಿ ಎಬಿವಿಪಿ ಹಿಂಸೆ ನಡೆಸಿರುವುದನ್ನು ಪ್ರತಿಭಟಿಸಲು ಎಸ್‌ಎಫ್ಐ ಸದಸ್ಯರು ಎಸ್‌ಪಿಪಿಯು ಕ್ಯಾಂಪಸ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು’ ಎಂದು ಹೇಳಿದ್ದಾರೆ.
“ಎಸ್‌ಎಫ್ಐ ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ಅಲ್ಲಿಗೆ ಏಕಾಏಕಿ ಬಂದ ಎಬಿವಿಪಿ ಕಾರ್ಯಕರ್ತರು ಎಸ್‌ಎಫ್ಐ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದರು’ ಎಂದು ಚವಾಣ್‌ದೂರಿದರು.