Advertisement

ವಿವಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

01:02 PM Jul 12, 2019 | Suhan S |

ಧಾರವಾಡ: ವಿಶ್ವವಿದ್ಯಾಲಯಗಳಲ್ಲಿನ ಕುಲಪತಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ಹಾಗೂ ವಿವಿಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ಕವಿವಿ ಆವರಣದಲ್ಲಿ ಎಬಿವಿಪಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

Advertisement

ರಾಜ್ಯ ಸಂಚಾಲಕ ಜಗದೀಶ ಮಾನೆ ಮಾತನಾಡಿ, ಶಿಕ್ಷಣವೆಂಬುವುದು ಮಾರಾಟದ ವಸ್ತುವಲ್ಲ. ಅದು ಸರ್ವರಿಗೂ ಸಿಗುವಂತಾಗಬೇಕು ಎಂಬ ಶ್ರೇಷ್ಠ ಸಂಸ್ಕೃತಿ ನಮ್ಮದು. ಶಿಕ್ಷಣದ ಮೂಲ ಉದ್ದೇಶ ಎತ್ತಿ ಹಿಡಿಯಲು ಅನೇಕ ವಿವಿಗಳು ಸ್ಥಾಪನೆಯಾಗಲು ಕಾರಣವಾಗಿವೆ. ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುವ ಅನೇಕ ಚಿಂತಕರು, ಅಧ್ಯಾಪಕರು, ಸಂಶೋಧಕರನ್ನು ಸೃಷ್ಟಿಸುವಲ್ಲಿ ವಿವಿಗಳ ಪಾತ್ರ ಬಹಳ ಮಹತ್ತರವಾದದ್ದು. ಸರ್ಕಾರ ತನ್ನದೇ ನಾಟಕದಲ್ಲಿ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದನ್ನು ಸಂಘಟನೆಯು ಖಂಡಿಸುತ್ತದೆ ಎಂದರು.

ಉನ್ನತ ಶಿಕ್ಷಣದ ಉಳಿವಿಗಾಗಿ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ವಿವಿಗಳ ಎಲ್ಲ ಹುದ್ದೆಗಳ ನೇಮಕಾತಿ ಮಾಡಬೇಕು. ವಿವಿಗಳ ನೇಮಕಾತಿಯನ್ನು ಕೆಇಎಗೆ ಕೊಡದೆ ಆಯಾ ವಿವಿಗಳಿಗೆ ಬಿಟ್ಟು ವಿವಿಗಳ ಸ್ವಾಯತ್ತತೆ ಹಕ್ಕನ್ನು ಉಳಿಸಬೇಕು. ರಾಜ್ಯದಲ್ಲಿ 412 ಪ್ರಥಮ ದರ್ಜೆ ಕಾಲೇಜುಗಳಿದ್ದು, ಇದರ ಪೈಕಿ ಬಹುತೇಕ ಕಾಲೇಜುಗಳಲ್ಲಿ ಗ್ರೇಡ್‌-01 ಪ್ರಾಂಶುಪಾಲರ ಹುದ್ದೆಗಳು ಮಂಜೂರಾಗಿದ್ದರೂ ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ ಕಡಿಮೆ. ಇನ್ನೂ ಅನೇಕ ಹುದ್ದೆಗಳು ಖಾಲಿ ಉಳಿದಿದ್ದು, ತಕ್ಷಣ ಈ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

ನಗರದ ಮಹಿಳಾ ಮಹಾವಿದ್ಯಾಲಯದಿಂದ ಮೆರವಣಿಗೆಯಲ್ಲಿ ತೆರಳಿ ಕವಿವಿ ಕುಲಪತಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಗಂಗಾಧರ ಹಂಜಗಿ, ಹನಮಂತ ಬಗಲಿ, ಶೇಖರ ಕೊಡಿಕೊಪ್ಪ, ಪವನ ಕರಿಕಟ್ಟಿ, ಹನುಮಂತ ಜೋಗಿ, ಚಿದಂಬರ ಶಾಸ್ತ್ರಿ, ರಶ್ಮಿ ಪಡತಾಳೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next