Advertisement

ತಾಳಿಕೋಟೆಯಲ್ಲಿ ಎಬಿವಿಪಿ ಪ್ರತಿಭಟನೆ

12:10 PM Jul 13, 2017 | |

ತಾಳಿಕೋಟೆ: ಎಲ್ಲ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಬಸ್‌ಪಾಸ್‌ ಒದಗಿಸಬೇಕೆಂದು ಆಗ್ರಹಿಸಿ ಬುಧವಾರ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಟ್ಟಣದಲ್ಲಿ ಬೃಹತ್‌ ಪ್ರತಿಭಟನೆ ಮಾಡಿ ತಹಶೀಲ್ದಾರ್‌ ಕಚೇರಿ ಆವರಣದ ಮುಂದೆ ಕೆಲ ಹೊತ್ತು ಧರಣಿ ನಡೆಸಿದರು.

Advertisement

ಸಾವಿರಾರು ಸಂಖ್ಯೆಯಲ್ಲಿ ಸೇರಿದ ವಿದ್ಯಾರ್ಥಿಗಳು ವಿಜಯಪುರ ಸರ್ಕಲ್‌ದಿಂದ ಪ್ರತಿಭಟನಾ ರ್ಯಾಲಿ ಆರಂಭಿಸಿ ಬಸ್‌ ನಿಲ್ದಾಣದ ಮುಂಭಾಗದ ರಸ್ತೆ, ರಾಣಾ ಪ್ರತಾಪ ಸರ್ಕಲ್‌, ಶಿವಾಜಿ ಸರ್ಕಲ್‌ ಮೂಲಕ ತಹಶೀಲ್ದಾರ್‌ ಕಚೇರಿ ಆವರಣಕ್ಕೆ ಆಗಮಿಸಿ ಕೆಲಹೊತ್ತು
ಧರಣಿ ನಡೆಸಿ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ವೇಳೆ ಎಬಿವಿಪಿ ನಗರ ಕಾರ್ಯದರ್ಶಿ ಕಿರಣ ಬಡಿಗೇರ ಮಾತನಾಡಿ, ರಾಜ್ಯಸರ್ಕಾರ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ವ್ಯವಸ್ಥೆ ಮಾಡಿದ್ದನ್ನು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಸ್ವಾಗತಿಸುತ್ತದೆ.
ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡಿದೆ. ಎಲ್ಲ ವರ್ಗದಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆ. ಬರಗಾಲದಿಂದ ತತ್ತರಿಸಿ
ಹೋಗಿರುವ ರೈತರ ಮಕ್ಕಳು ಇದ್ದಾರೆ. ಅಂತಹ ಸಂಕಷ್ಟದಲ್ಲಿ ಜೀವನ ಕಳೆಯುತ್ತಿರುವ ರೈತರ ಮಕ್ಕಳಿಗೆ ದಿನನಿತ್ಯ ಶಾಲೆ ಕಾಲೇಜುಗಳಿಗೆ ತೆರಳಲು ಉಚಿತ ಬಸ್‌ಪಾಸ್‌ ವ್ಯವಸ್ಥೆ ಕಲ್ಪಿಸಿಲ್ಲ. ಇದನ್ನು ಕೂಡಲೇ ವಿಸ್ತರಿಸಿ ಬಡ ಕೂಲಿಕಾರ್ಮಿಕರ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕೆಂಬುವುದು ಒತ್ತಾಯವಾಗಿದೆ ಎಂದರು. 

ವಿದ್ಯಾರ್ಥಿ ರಾಜೇಶ ಮಸರಕಲ್ಲ ಮಾತನಾಡಿ, ಇಂದಿನ ಖಾಸಗಿ ಕಾಲೇಜುಗಳ ಡೊನೇಷನ್‌ ಹಾವಳಿಯಿಂದ ಶಿಕ್ಷಣ ಮಾರಾಟದ
ವಸ್ತುವಾದಂತಾಗಿದೆ. ಈ ಪರಿಸ್ಥಿತಿಯಲ್ಲಿ ಕೆಲ ಬಡ ವಿದ್ಯಾರ್ಥಿಗಳಿಗೆ ಫಿ ಕಟ್ಟಲು ಸಹ ಆಗದೇ ಪರದಾಡುತ್ತಿದ್ದಾರೆ. ಹಿಂದುಳಿದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದಲೇ ವಂಚಿತರಾಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿಯೇ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳು ಇರುವುದು ಸರ್ಕಾರದ ಗಮನಕ್ಕೆ ಇದ್ದರೂ ಸಹ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು
ಸರ್ಕಾರವು ಒತ್ತು ನೀಡುತ್ತಿಲ್ಲವೆಂದು ಸರ್ಕಾರದ ಧೋರಣೆಯನ್ನು ಖಂಡಿಸಿದರು. ಇನ್ನೋರ್ವ ವಿದ್ಯಾರ್ಥಿ ದೇವರಾಜ ನಾಯ್ಕಲ್‌
ಮಾತನಾಡಿ, ಕೆಲ ಗ್ರಾಮೀಣ ಭಾಗಗಳಿಗೆ ಇನ್ನೂ ಬಸ್‌ ಸೌಕರ್ಯ ಕಲ್ಪಿಸಿಲ್ಲ. ಅಂತಹ ಪ್ರದೇಶಗಳನ್ನು ಗುರುತಿಸುವುದರೊಂದಿಗೆ ಬಸ್‌ಸಂಚಾರ ಪ್ರಾರಂಭಿಸಿ ಎಲ್ಲ ವರ್ಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ವ್ಯವಸ್ಥೆ ಕಲ್ಪಿಸಿ ಪ್ರೋತ್ಸಾಹಿಸುವ
ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ನಂತರ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ವಿಶೇಷ ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ನಗರ ಉಪ ಕಾರ್ಯದರ್ಶಿ ಭರತ ಗಿರಣಿವಡ್ಡರ, ಬಸವರಾಜ ವಿಜಾಪುರ, ಸುರೇಶ ಅಲ್ಲಾಪುರ, ನಿಂಗಣ್ಣ ನಗನೂರ, ಶಶಿಧರ ರಂಜಣಗಿ, ಶಿವಕುಮಾರ ಹಿರೇಮಠ, ರೆಡ್ಡಿ ಮಾಳಿ, ದೇವರಾಜ ಕಟ್ಟಿಮನಿ, ಮೆಹಬೂಬ ಪಟೇಲ್‌, ಕಾಶೀನಾಥ ಅರಳಿಚಂಡಿ, ಕಾಶ ಪಾಟೀಲ, ಭೀಮನಗೌಡ ಕಕ್ಕೇರಿ, ಸದಾನಂದ ಕಕ್ಕೇರಿ ನೇತೃತ್ವ ವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next