ಮಂಗಳೂರು: ಜ್ಞಾನ ಭೂಮಿ, ಧರ್ಮ ಭೂಮಿ, ಕರ್ಮಭೂಮಿಯಾಗಿದ್ದ ಭಾರತ 1,200 ವರ್ಷಗಳ ಕಾಲ ಪರಕೀಯರ ದಾಳಿಯಿಂದ ಸಂಪೂರ್ಣವಾಗಿ ತನ್ನತನವನ್ನು ಕಳೆದುಕೊಳ್ಳುವಂತಾಯಿತು. ಮೆಕಾಲೆ ಶಿಕ್ಷಣ ಪದ್ಧತಿ ಜಾರಿಗೊಳಿಸಿದ ಬ್ರಿಟಿಷರು ಇಲ್ಲಿನ ಜನರ ಮನಃಸ್ಥಿತಿಯನ್ನೇ ಬದಲಾಯಿಸುವಲ್ಲಿ ಯಶಸ್ವಿಯಾದರು. ಆದರೆ ಇಂದು ಮತ್ತೆ ವಿಶ್ವಕ್ಕೆ ಭಾರತ ಏನೆಂದು ತೋರಿಸಿಕೊಟ್ಟಿದ್ದೇವೆ ಎಂದು ಎಬಿವಿಪಿ ರಾಷ್ಟ್ರೀಯ ಸಹ ಸಂಘಟನ ಕಾರ್ಯದರ್ಶಿ ಬಾಲಕೃಷ್ಣ ಜಿ. ಹೇಳಿದರು.
ಇಲ್ಲಿನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಬುಧವಾರ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿದ್ದ ಭಾರತದಲ್ಲಿ ಅತ್ಯುನ್ನತ ಶ್ರೇಣಿಯ ವಿಶ್ವವಿದ್ಯಾನಿಲಯಗಳು ಇದ್ದವು. ಇಲ್ಲಿ ಉತ್ಪಾದನೆಯಾಗುತ್ತಿದ್ದ ಶೇ. 60ರಷ್ಟು ಉತ್ಪನ್ನಗಳು ವಿಶ್ವ ಮಾರುಕಟ್ಟೆಯಲ್ಲಿ ಸ್ಥಾನ ಪಡೆದಿದ್ದವು. ಆದರೆ ಬ್ರಿಟಿಷರು ಬಂದು ಒಡೆದು ಆಳುವ ನೀತಿಯನ್ನು ಅನುಸರಿಸಿ ಶ್ರೀಮಂತ ದೇಶವನ್ನು ಬಡದೇಶವನ್ನಾಗಿ ಮಾಡುವಲ್ಲಿ ಯಶಸ್ವಿಯಾದರು. ಇಂದು ಮತ್ತೆ ಭಾರತ ವಿಶ್ವ ಗುರುವಿನ ಸ್ಥಾನದತ್ತ ಸಾಗುತ್ತಿದ್ದು, ವಿಶ್ವದಲ್ಲಿ ದೇಶದ ಪ್ರತಿಷ್ಠೆ ಹೆಚ್ಚುತ್ತಿದೆ ಎಂದರು.
ಆರ್ಥಿಕತೆ, ವಿಜ್ಞಾನ- ತಂತ್ರಜ್ಞಾನ ಕ್ಷೇತ್ರದಲ್ಲಿ ಅಪೂರ್ವ ಬದಲಾವಣೆಗಳು ದೇಶದಲ್ಲಿ ಆಗಿವೆ. ಇದರ ನಡುವೆಯೇ ಕೆಲವು ವಿದೇಶಿ ಸಂಘ ಸಂಸ್ಥೆಗಳು ದೇಶದ ವಿರುದ್ಧ ಕೆಲಸ ಮಾಡುತ್ತಿವೆ. ಯುವ ಜನತೆ ಸಂಕಲ್ಪ ಮಾಡಿದರೆ ಇದನ್ನು ತಡೆಯುವುದು ಸುಲಭದ ಕೆಲಸ. ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಜತೆಗೆ ಎಬಿವಿಪಿಯೂ ಅಮೃತ ಮಹೋತ್ಸವದ ಹೊಸ್ತಿಲಲ್ಲಿದ್ದು, ದೇಶದ ತಣ್ತೀ, ಸಿದ್ಧಾಂತ ಸಂಸ್ಕೃತಿಯನ್ನೇ ಸಿದ್ಧಾಂತವಾಗಿ ಇಟ್ಟುಕೊಂಡಿರುವ ಸಂಘಟನೆಯಾಗಿದೆ ಎಂದು ಅವರು ಹೇಳಿದರು.
ಎಸ್‌ಸಿಎಸ್ ಕಾಲೇಜು ಪ್ರಾಂಶುಪಾಲ ಡಾ| ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಅವರು ಮಾತನಾಡಿ, ಭಾರತೀಯ ಸಂಸ್ಕೃತಿ, ಆಚಾರ, ವಿಚಾರಗಳಿಗೆ ಇಂದು ವಿದೇಶೀಯರು ಮಾರು ಹೋಗಿದ್ದಾರೆ. ಪ್ರಪಂಚಕ್ಕೆ ಮಾತೃ ಸ್ಥಾನದಲ್ಲಿರುವ, ಸಂಸ್ಕಾರ ಹೇಳಿ ಕೊಡುವ ನಮಗೇ ನಮ್ಮ ಸಂಸ್ಕೃತಿ ಬೇಡವಾಗಿರುವುದು ಶೋಚನೀಯ ಹಾಗೂ ಯೋಚನೀಯ. ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ಹೊಸ ಭವಿಷ್ಯ ಬರೆಯುವ ತಾಕತ್ತು ಇರುವುದು ಎಬಿಪಿವಿಗೆ ಮಾತ್ರ ಎಂದರು.
ರಾಷ್ಟ್ರೀಯ ಸ್ವಾಯಂ ಸೇವಕ ಸಂಘದ ಮಂಗಳೂರು ಮಹಾನಗರ ಸೇವಾ ಪ್ರಮುಖ್ ಶ್ರೀಧರ ಶೆಟ್ಟಿ ಪುಳಿಂಚ, ಎಬಿವಿಪಿ ಮಂಗಳೂರು ವಿಭಾಗ ಪ್ರಮುಖ್ ಕೇಶವ ಬಂಗೇರ ಉಪಸ್ಥಿತರಿದ್ದರು. ಎಬಿವಿಪಿ ಜಿಲ್ಲಾ ಸಂಚಾಲಕ ಶ್ರೇಯಸ್ ಶೆಟ್ಟಿ ಸ್ವಾಗತಿಸಿದರು.