ಬೆಳಗಾವಿ: ತಪ್ಪಾಗಿ ಹಾಗೂ ಅಜಾಗರೂಕತೆಯಿಂದ ಮೌಲ್ಯಮಾಪನ ಮಾಡುವ ಅಧ್ಯಾಪಕರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗುಣಮಟ್ಟ ಕಾಪಾಡಬೇಕು ಎಂದು ಆಗ್ರಹಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ವಿಟಿಯು ಆವರಣದಲ್ಲಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿಟಿಯು ವ್ಯಾಪ್ತಿಯಲ್ಲಿ ರಾಜ್ಯದ ವಿವಿಧ ಕಡೆ ಲಕ್ಷಾಂತರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ವಿಶ್ವವಿದ್ಯಾಲಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಆತಂಕ ವ್ಯಕ್ತವಾಗುತ್ತಿದೆ. ಅನೇಕ ಸಮಸ್ಯೆಗಳಿದ್ದು, ಇವುಗಳನ್ನು ಪರಿಹರಿಸಲು ಕೌನ್ಸಿಲ್ ಸಭೆಯಲ್ಲಿ ಚರ್ಚಿಸಬೇಕು ಎಂದು ಆಗ್ರಹಿಸಿದರು.
ಡಿಜಿಟಲ್ ಮೌಲ್ಯಮಾಪನ ಮತ್ತು ಮರು ಮೌಲ್ಯಮಾಪನ ಕುರಿತು ವಿದ್ಯಾರ್ಥಿಗಳಲ್ಲಿ ಗೊಂದಲ ಕಡಿಮೆ ಮಾಡುವ ನಿಟ್ಟಿನಲ್ಲಿ ಚರ್ಚಿಸಬೇಕು. ವಿವಿ ಹಣಕಾಸಿ ಅಡಿಟ್ ಸಲುವಾಗಿ 30 ಕೋಟಿ ರೂ. ಕೊಟ್ಟಿರುವ ಬಗ್ಗೆ ತನಿಖೆ ನಡೆಸಬೇಕು. ಮೂರನೇ ವರ್ಷದ ದಾಖಲಾತಿಗಳು ಆರಂಭವಾದರೂ ವಿವಿಯಲ್ಲಿ ಸರಿಯಾದ ಪ್ರಯೋಗಾಲಯ ಇಲ್ಲ ಎಂದು ಆಗ್ರಹಿಸಿದರು.
ಕಾಲೇಜು ಹಾಗೂ ವಿವಿ ಮಟ್ಟದಲ್ಲಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರತ್ಯೇಕವಾಗಿ ವಿದ್ಯಾರ್ಥಿ ಪ್ರತಿನಿಧಿ ಹಾಗೂ ಡೀನ್ ನೇಮಿಸಬೇಕು. ವಿದ್ಯಾರ್ಥಿಗಳ ಸಮಸ್ಯೆ ಕುಂದು-ಕೊರತೆ ವಿಭಾಗ ಆರಂಭಿಸಬೇಕು ಎಂದು ಒತ್ತಾಯಿಸಿದರು. ಕಲಪತಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.
ವಿಭಾಗ ಸಂಘಟನಾ ಕಾರ್ಯದರ್ಶಿ ಪೃಥ್ವಿ ಕುಮಾರ, ಸಹ ಸಂಚಾಲಕ ರೋಹಿತ ಉಮನಾದಿಮಠ, ನಗರ ಕಾರ್ಯದರ್ಶಿ ಅನುದೀಪ ಕುಲಕರ್ಣಿ, ಸುನೀಲ, ಸಮ್ಮೇದ ಬಾಬನ್ನವರ, ಶಿವಾನಂದ , ಪ್ರಮೋದ ಇದ್ದರು.