Advertisement

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

04:58 PM Jan 05, 2025 | Team Udayavani |

ದಾವಣಗೆರೆ: ಕೆಲ ದುಷ್ಟ ಶಕ್ತಿಗಳು ದೇಶದ ನೆಮ್ಮದಿ ಕೆಡಿಸಲು, ಪ್ರಗತಿ ಹಾಳು ಮಾಡಲು ಧರ್ಮ-ಜಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಇಂಥ ವಿಕೃತಿಯಿಂದ ಯುವ ಜನತೆ ದೂರ ಉಳಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯುವಜನತೆಗೆ ಕರೆ ನೀಡಿದರು.

Advertisement

ನಗರದ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ರವಿವಾರ(ಜ5) ಆಯೋಜಿಸಿದ್ದ ರಾಜ್ಯ ಮಟ್ಟದ ಯುವಜನೋತ್ಸವವನ್ನು ನಗಾರಿ ಬಾರಿಸಿ, ಅಡಕೆ ಹೊಂಬಾಳೆ ಬಿಡಿಸುವ ಮೂಲಕ ಉದ್ಘಾಟಿಸಿ  ಮಾತನಾಡಿದರು.

ಕೆಲವರು ಸಮಾಜದ ಶಾಂತಿ ಭಂಗ ಮಾಡಲು ಪ್ರಯತ್ನಿಸುತ್ತಿದ್ದಾರೆ. ಜಾತಿ, ಧರ್ಮದ ಹೆಸರಲ್ಲಿ ರಾಜಕೀಯ ಮಾಡುತ್ತಾರೆ. ಇಂಥ ದುಷ್ಕೃತ್ಯಗಳಿಗೆ ನಾವು ಮಾರು ಹೋಗಬಾರದು. ಅದರ ವಿರುದ್ಧ ಧ್ವನಿ ಎತ್ತುವ ಕಾರ್ಯ ಮಾಡಬೇಕು. ಸಮಾಜ ಹಾಳು ಮಾಡುವ ದುಷ್ಟ ಶಕ್ತಿಗಳಿಂದ ಯುವ ಜನತೆ ದೂರ ಉಳಿದು ತಮ್ಮ ಬದುಕು-ಭವಿಷ್ಯ ಕಾಪಾಡಿಕೊಳ್ಳಬೇಕು. ಎಲ್ಲರೂ ಮನುಷ್ಯತ್ವ ಬೆಳೆಸಿಕೊಂಡು ಮನುಷ್ಯರಾಗಿ ಬಾಳಬೇಕು. ಸಮಾಜಮುಖಿಯಾಗಿ ಬೆಳೆಯಬೇಕು ಎಂದರು.

ದೇಶದ ಸ್ವಾತಂತ್ರ್ಯ ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬರೂ ಆರ್ಥಿಕ, ಸಾಮಾಜಿಕವಾಗಿ ಸಬಲರಾಗಬೇಕು. ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ಯ ಎಲ್ಲರಿಗೂ ಸಿಗಬೇಕು. ಇವುಗಳನ್ನು ಒಂದೊಂದಾಗಿ ಬೇರ್ಪಡಿಸಿ ನೋಡಲಾಗದು. ಇವು ಒಂದಕ್ಕೊಂದು ಹೊಂದಾಣಿಕೆಯಿಂದ ಇರಬೇಕು. ಆಗ ಮಾತ್ರ ಪ್ರಜಾಪ್ರಭುತ್ವ ಉಳಿಸಿ, ಬೆಳೆಸಲು ಸಾಧ್ಯ ಎಂದರು.

ದೇಶಕ್ಕೆ ಆಸ್ತಿಯಾಗಬೇಕು
ದೇಶದಲ್ಲಿ ಶೇ. 35 ರಷ್ಟು ಯುವಜನತೆ ಇದೆ. ಇವರೇ ದೇಶದ ಆಸ್ತಿ. ಇವರು ದೇಶದ ಆಸ್ತಿಯಾಗಬೇಕಾದರೆ ಪ್ರತಿಯೊಬ್ಬರೂ ಸಮಾಜಮುಖಿಯಾಗಿ ಬೆಳೆಯಬೇಕು. ಇವರಿಗೆಲ್ಲ ವೈಚಾರಿಕತೆ, ವೈಜ್ಞಾನಿಕತೆಯಿಂದ ಕೂಡಿದ ಶಿಕ್ಷಣ ದೊರಕಬೇಕು. ಆಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಯುವ ಜನತೆ ದೇಶಕ್ಕೆ ಹೊರೆಯಾಗದೆ, ದೇಶಕ್ಕೆ ಸಂಪತ್ತಾಗಿ ಬೆಳೆಯಬೇಕು ಎನ್ನುವ ಸಂಕಲ್ಪದೊಂದಿಗೆ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

Advertisement

ಸ್ವಾಮಿ ವಿವೇಕಾನಂದರು ”ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ” ಎಂದು ಯುವಜನತೆಯನ್ನುದ್ದೇಶಿಸಿ ಕರೆ ನೀಡಿದ್ದಾರೆ. ಗುರಿ ಮುಟ್ಟಲು ಎಲ್ಲರೂ ಪರಿಶ್ರಮ ಪಡಬೇಕು. ದೇಶ ನಮಗೇನು ಕೊಟ್ಟಿತು ಎನ್ನುವುದಕ್ಕಿಂತ, ದೇಶಕ್ಕೆ ನಾವೇನು ಕೊಟ್ಟೆವು ಎನ್ನುವುದೇ ನಮಗೆ ಮುಖ್ಯವಾಗಬೇಕು. ಪ್ರತಿಯೊಬ್ಬರೂ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next