Advertisement

ಮಂಜೂರಾದ ಜಮೀನು ದುರ್ಬಳಕೆ 

12:38 PM Dec 22, 2017 | |

ನರಿಂಗಾನ: ಇಸ್ಲಾಮಿಕ್‌ ಎಜುಕೇಶನ್‌ ಟ್ರಸ್ಟಿಗೆ ಮಂಜೂರಾದ ಜಮೀನು ದುರ್ಬಳಕೆ ವಿಚಾರವಾಗಿ ನಡೆದ ಚರ್ಚೆಯಿಂದಾಗಿ ನರಿಂಗಾನ ಗ್ರಾಮ ಪಂಚಾಯತ್‌ನ 2017-18 ಸಾಲಿನ ಎರಡನೇ ಸುತ್ತಿನ ಗ್ರಾಮಸಭೆ ರದ್ದುಗೊಂಡು ಮುಂದೂಡಲ್ಪಟ್ಟ ಘಟನೆ ಕೊಲ್ಲರಕೋಡಿ ಸರಕಾರಿ ಶಾಲೆಯಲ್ಲಿ ಗುರುವಾರ ನಡೆಯಿತು. ಗ್ರಾ.ಪಂ. ಅಧ್ಯಕ್ಷ ಇಸ್ಮಾಯಿಲ್‌ ಮೀನಂಕೋಡಿ ಅಧ್ಯಕ್ಷತೆಯಲ್ಲಿ ಆರಂಭವಾದ ಗ್ರಾಮಸಭೆಯ ಆರಂಭದಲ್ಲೇ, ನೆತ್ತಿಲಪದವಿನಲ್ಲಿ ಇಸ್ಲಾಮಿಕ್‌ ಎಜುಕೇಷನ್‌ ಟ್ರಸ್ಟಿಗೆ ಮಂಜೂರಾದ ಜಮೀನಿನ ದುರ್ಬಳಕೆ ಕುರಿತ ಚರ್ಚೆ ನಡೆಯಿತು.

Advertisement

18 ವರ್ಷಗಳ ಹಿಂದೆ ಅಲ್ಪಸಂಖ್ಯಾಕ ನಿಗಮದಡಿ ಇಸ್ಲಾಮಿಕ್‌ ಎಜುಕೇಷನ್‌ ಟ್ರಸ್ಟ್‌ ಹೆಸರಿನಲ್ಲಿ 8 ಎಕರೆ ಸರಕಾರಿ ಜಮೀನು ಕೇರಳ ಮೂಲದ ವ್ಯಕ್ತಿಗೆ ನರಿಂಗಾನ ಗ್ರಾಮದ 1ನೇ ವಾರ್ಡು ನೆತ್ತಿಲಪದವು ಬಳಿ ಮಂಜೂರಾಗಿತ್ತು. ಇದಕ್ಕೆ ಗ್ರಾಮಸ್ಥರ ವಿರೋಧವಿತ್ತು. ಆದರೆ ಪೊಲೀಸ್‌ ಬಂದೋಬಸ್ತಿನಲ್ಲಿ ಕಟ್ಟಡ ಕಾಮಗಾರಿ ನಡೆದಿತ್ತು. ಮಂಜೂರಾದ ಜಮೀನಿನಲ್ಲಿ ಶಾಂತಿಪಾಲ ಆಂಗ್ಲ ಮಾಧ್ಯಮ ಶಾಲೆ ಕಾರ್ಯಾಚರಣೆ ಆರಂಭಿಸಿತ್ತು. ಡೊನೇಷನ್‌ ಪಡೆದುಕೊಂಡೇ ಆರಂಭವಾದ ಶಾಲೆಗೆ ಸರಕಾರದಅನುದಾನ ದೊರೆತು ಅನುದಾನಿತ ಶಾಲೆಯಾಗಿ ಮುಂದುವರಿದಿತ್ತು.

ಅನುದಾನ ಕಡಿತ
ಕ್ರಮೇಣ ಶಾಲಾ ಅವ್ಯವಸ್ಥೆಯಿಂದ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗಿದ್ದು, ಐದು ವರ್ಷಗಳಿಂದ ಬೆರಳೆಣಿಕೆ ವಿದ್ಯಾರ್ಥಿಗಳು ಮಾತ್ರ ಬರಲು ಆರಂಭಿಸಿದ್ದರು. ಈ ಬಗ್ಗೆ ನರಿಂಗಾನ ಗ್ರಾಮಸಭೆಯಲ್ಲಿ ಚರ್ಚೆಗಳು ನಡೆದಿದ್ದು, ಆಂಗ್ಲ ಮಾಧ್ಯಮ ಶಾಲೆಯನ್ನು ಅನುದಾನಿತ ಮಾಡಿರುವುದರ ವಿರುದ್ಧವೂ ಅಪಸ್ವರ ಕೇಳಿಬಂದಿತ್ತು. ಅಲ್ಲದೆ ವಿದ್ಯಾರ್ಥಿಗಳ ಸಂಖ್ಯೆ ಇಲ್ಲದಿರುವುದರಿಂದ ಅನುದಾನ ಕಡಿತಗೊಳಿಸಿ ಶಾಲೆಯನ್ನು ರದ್ದುಗೊಳಿಸುವಂತೆ ಪಂಚಾಯತ್‌ನಿಂದ ನಿರ್ಣಯ ಕೈಗೊಳ್ಳಲಾಗಿತ್ತು. ವರ್ಷದ ಹಿಂದೆ ಜಿಲ್ಲಾ ಪಂಚಾಯತ್‌ ಸದಸ್ಯೆ ಮಮತಾ ಡಿ.ಎಸ್‌. ಗಟ್ಟಿ ನೇತೃತ್ವದಲ್ಲಿ ಶಿಕ್ಷಣ ಇಲಾಖೆಗೆ ಪತ್ರ ಬರೆದು, ಶಾಲಾ ಅನುಮತಿಯನ್ನು ರದ್ದುಗೊಳಿಸಲಾಗಿತ್ತು. ಆದರೆ ಟ್ರಸ್ಟ್‌ಗೆ ಮಂಜೂರಾದ ಜಾಗವನ್ನು ವ್ಯಕ್ತಿ ಮಾರಾಟ ಮಾಡಲು ಯತ್ನಿಸುತ್ತಿದ್ದು, ಮಂಜೂರಾದ 8 ಎಕರೆ ಜಮೀನಿಗೆ ಬೇಲಿ ಹಾಕದೆ ಸುತ್ತಲಿನ ಜಾಗವನ್ನು ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂತು.

ನೋಡಲ್‌ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಮೋಹನ್‌ ಕುಮಾರ್‌ ವಹಿಸಿದ್ದರು. ಉಪಾಧ್ಯಕ್ಷೆ ಮೀನಾಕ್ಷಿ ಹಾಗೂ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಅಧಿಕಾರಿಗಳ ನಿರ್ಲಕ್ಷ್ಯ
ಮೂರು ಗ್ರಾಮಸಭೆಯಲ್ಲಿಯೂ ಕಂದಾಯ ಇಲಾಖೆ ಜಾಗವನ್ನು ಇಲಾಖೆ ಸುಪರ್ದಿಗೆ ಪಡೆಯುವಂತೆ ಒತ್ತಾಯಿಸುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದೇ ಕಾರಣಕ್ಕೆ ಹಿಂದೆಯೂ ಗ್ರಾಮಸಭೆ ರದ್ದುಗೊಂಡಿದ್ದರೂ, ಸಂಬಂಧಪಟ್ಟ ತಹಶೀಲ್ದಾರ್‌ ಕೂಡ ಗ್ರಾಮಸಭೆಗೆ ಹಾಜರಾಗುತ್ತಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ಸಭೆಯನ್ನೇ ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ.

Advertisement

ಅಧ್ಯಕ್ಷರಿಗೆ ಸೂಚನೆ
ತನ್ನಿಂದ ಆದ ಪ್ರಯತ್ನವನ್ನು ಮುಂದುವರಿಸುತ್ತಾ ಬಂದಿದ್ದೇನೆ. ಆದರೆ ಮುಂದಿನ ಗ್ರಾಮಸಭೆ ತಹಶೀಲ್ದಾರ್‌ ಬಾರದೆ ನಡೆಯುವುದಿಲ್ಲ. ಗ್ರಾಮಸ್ಥರ ಒತ್ತಾಯದಂತೆ ಸಭೆಯನ್ನು ರದ್ದುಗೊಳಿಸುವಂತೆ ಅಧ್ಯಕ್ಷರಿಗೆ ಸೂಚಿಸಿದ್ದಾರೆ.
ಮಮತಾ ಡಿ.ಎಸ್‌.ಗಟ್ಟಿ
  ಜಿ.ಪಂ. ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next