ತುಮಕೂರು: ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಗೋಮಾಳದಲ್ಲಿ ಭೂಮಿ ಉಳುಮೆ ಮಾಡಿಕೊಂಡಿರುವ ರೈತರ ಮೇಲೆ ದಬ್ಟಾಳಿಕೆ ಮಾಡುವುದನ್ನು ನಾನು ಸಹಿಸುವುದಿಲ್ಲ ಎಂದು ಅರಣ್ಯಾಧಿಕಾರಿಗಳಿಗೆ ಶಾಸಕ ಡಿ.ಸಿ.ಗೌರಿಶಂಕರ್ ಖಡಕ್ ಎಚ್ಚರಿಕೆ ನೀಡಿದರು.
ನಗರದ ತಾಪಂ ಸಭಾಂಗಣದದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ಗ್ರಾಮಾಂತರ ಕ್ಷೇತ್ರದಲ್ಲಿ ಕಾನೂನು ಉಲ್ಲಂಘನೆ ಮಾಡಿ ಅಕ್ರಮವಾಗಿ ಅರಣ್ಯವನ್ನು ಒತ್ತುವರಿ ಮಾಡಲಾಗಿದೆ ಅವರ ಮೇಲೆ ಕ್ರಮ ಕೈಗೊಳ್ಳುವುದು ಬಿಟ್ಟು ರೈತರ ಮೇಲೆ ನಿಮ್ಮ ಗಧಾಪ್ರಹಾರವೇ ಎಂದು ಪ್ರಶ್ನಿಸಿದರು.
ಅಕ್ರಮವಾಗಿ ಅರಣ್ಯವನ್ನು ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ಮಾಡುವವರ ಮೇಲೆ ಕ್ರಮ ಕೈಗೊಳ್ಳದೇ ರೈತರ ವಿರುದ್ಧ ಠಾಣೆಗಳಲ್ಲಿ ದೂರುಗಳನ್ನು ಸಲ್ಲಿಸುತ್ತಿದ್ದೀರಾ, ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗಳ ಬಗ್ಗೆ ಮಾಹಿತಿ ಕೊಡಿ ಎಂದು ಅರಣ್ಯ ಇಲಾಖೆಯವಲಯ ಅಧಿಕಾರಿ ಪವಿತ್ರ ಹಾಗೂ ನಟರಾಜುರವರನ್ನು ತರಾಟೆಗೆ ತೆಗೆದುಕೊಂಡರು.
ಕ್ಷೇತ್ರದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಕ್ರಷರ್‌ಗಳ ಮಾಲೀಕರ ಲಾರಿಗಳು ರಸ್ತೆಯಲ್ಲಿ ಸಂಚಾರ ಮಾಡುವುದರಿಂದ ರಸ್ತೆಗಳೆಲ್ಲಾ ಹಾಳಾಗಿ ಸಾರ್ವಜನಿಕರು ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ, ಅವರಿಗೆ ರಸ್ತೆ ನಿರ್ಮಿಸಿಕೊಡುವಂತೆ ನೋಟಿಸ್ ಜಾರಿ ಮಾಡುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿದರು.ಅಕ್ರಮವಾಗಿ ಕಲ್ಲು ಗಣಿಗಾರಿಕೆ ಲಾರಿಗಳ ಸಂಚಾರದಿಂದ ಮೈದಾಳ ಸೇರಿದಂತೆ ಹಲವಾರು ಕಡೆ ರಸ್ತೆಗಳು ಹಾಳಾಗಿದ್ದು, ಸಾರ್ವಜನಿಕರು ಸಂಚಾರ ಮಾಡುವುದು ಕಷ್ಟವಾಗಿದೆ. ಈ ಕೂಡಲೇ ಗಣಿಗಾರಿಕೆ ಮಾಡುತ್ತಿರುವ ಮಾಲೀಕರಿಗೆ ರಸ್ತೆ ನಿರ್ಮಿಸಿ ಕೊಡುವಂತೆ ನೋಟಿಸ್ ಕಳಿಸುವಂತೆ ತಿಳಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಗಣಿಗಾರಿಕೆ ನೆಡೆಸುತ್ತಿರುವವರ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಾ, ತಪ್ಪಿತಸ್ಥರ ವಿರುದ್ಧ ವಸೂಲಿ ಮಾಡಿರುವ ರಾಜಧನ ಎಷ್ಟಿದೆ ಮಾಹಿತಿ ಕೊಡಿ ಎಂದು ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು 19.42 ರಷ್ಟು ರಾಜಧನ ಸಂಗ್ರಹಣೆ ಮಾಡಿರುವ ಬಗ್ಗೆ ಮಾಹಿತಿ ನೀಡಿದರು. ತಾಪಂಯ ಇಒ ಜೈಪಾಲ್, ತಹಶೀಲ್ದಾರ್ ಮೋಹನ್‌ಕುಮಾರ್, ತಾಲೂಕು ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷ ಸಿದ್ದಪ್ಪ, ತಾಪಂ ಸದಸ್ಯ ಪ್ರದೀಪ್ ಇದ್ದರು.