Advertisement

Abu Dhabi-Chennai ವಿಮಾನದಲ್ಲಿ ವೈರಿಂಗ್‌ ಬಿಚ್ಚಿ ಚಿನ್ನ ಕಳ್ಳಸಾಗಣೆ!

12:17 AM Mar 07, 2024 | Team Udayavani |

ಹೊಸದಿಲ್ಲಿ: ಕೈಯಲ್ಲಿ, ಒಳ ಉಡುಪುಗಳಲ್ಲಿ, ಪಾದರಕ್ಷೆಗಳಲ್ಲಿ ಚಿನ್ನ ಬಚ್ಚಿಟ್ಟು ಕಳ್ಳಸಾಗಣೆಗೆ ಯತ್ನಿಸಿದ ಬಳಿಕ, ಕಳ್ಳರು ಇದೀಗ ಹೈಟೆಕ್‌ ಮಾರ್ಗದಲ್ಲಿ ಚಿನ್ನ ಕಳ್ಳಸಾಗಣೆಗೆ ಮುಂದಾಗಿದ್ದಾರೆ. ವಿಮಾನದ ವೈರಿಂಗ್‌ ಅನ್ನೇ ಬಿಚ್ಚಿ 4.5 ಕೆಜಿ ಚಿನ್ನ ಬಚ್ಚಿಟ್ಟಿದ್ದ ಪ್ರಕರಣವೊಂದು ವರದಿಯಾಗಿದೆ. ಜತೆಗೆ ವೈರಿಂಗ್‌ಗೆ ಕೈಹಾಕುವ ಅತ್ಯಂತ ಅಪಾಯಕಾರಿ ಮಾರ್ಗದ ಬಗ್ಗೆ ಆತಂಕ ವ್ಯಕ್ತವಾಗಿದೆ. ಅಬುಧಾಬಿಯಿಂದ ಗುರುವಾರ ರಾತ್ರಿ ಚೆನ್ನೈಗೆ ಬಂದಿಳಿದಿದ್ದ ಇಂಡಿಗೋ ವಿಮಾನವೊಂದರಲ್ಲಿ ಈ ಘಟನೆ ನಡೆದಿದೆ.

Advertisement

ಕಸ್ಟಮ್ಸ್‌ ಅಧಿಕಾರಿಗಳ ಪ್ರಕಾರ, ಶೌಚಾಲಯದ ಮೇಲ್ಛಾವಣಿಯಲ್ಲಿ ವೈರ್‌ಗಳಿದ್ದ ಬೋರ್ಡ್‌ ಬಾಕ್ಸ್‌ ಅನ್ನು ಖದೀಮರುಚಾಣಾಕ್ಷತೆಯಿಂದ ತೆರೆದಿದ್ದಾರೆ. ನಂತರ ಆಯತಾಕಾರದಲ್ಲಿರುವ ಹಾಗೂ ಮಧ್ಯದಲ್ಲಿ ರಂಧ್ರವಿರುವ ಚಿನ್ನದ ಬಿಲ್ಲೆಗಳ ಒಳಗೆ ಕೆಲ ವೈರ್‌ಗಳನ್ನು ತೂರಿಸಿದ್ದಾರೆ. ಈ ವೈರ್‌ನ ಇನ್ನೊಂದು ತುದಿಯಲ್ಲಿ ಒಂದು ಪ್ಯಾಡ್‌ಲಾಕ್‌ ಅಳವಡಿಸಲಾಗಿದೆ. ಅರ್ಥಾತ್‌ ಬೀಗದಂತೆ ಇರುವ ಈ ಲಾಕ್‌ಗೆ 3 ಅಂಕಿಗಳ ಕೋಡ್‌ ಸಂಖ್ಯೆ ಹಾಕಲಾಗಿದೆ. ಅದೇ ವೈರ್‌ಗಳನ್ನು ಈಗಾಗಲೇ ಬೋರ್ಡ್‌ನಲ್ಲಿರುವ ವೈರ್‌ಗಳ ಜತೆಗೆ ಬೆಸೆಯಲಾಗಿದೆ.

ವಿಮಾನವು ನಿಲ್ದಾಣಕ್ಕೆ ತಲುಪಿದ ಬಳಿಕ, ಈ ಯೋಜನೆಯಲ್ಲಿ ಭಾಗಿಯಾದ, ಕೋಡ್‌ ಸಂಖ್ಯೆ ತಿಳಿದಿರುವ ವ್ಯಕ್ತಿ ಮಾತ್ರ ವೈರ್‌ ಅನ್ನು ಬೇರ್ಪಡಿಸಿ, ಸಂಬಂಧಪಟ್ಟವರಿಗೆ ತಲುಪಿಸುವಂತೆ ರೂಪಿಸಲಾಗಿದೆ. ಆದರೆ, ಚೆನ್ನೈಗೆ ಬಂದಿಳಿದಿದ್ದ ವಿಮಾನ ಹೈದರಾಬಾದ್‌ಗೆ ತೆರಳಲು ಸಜ್ಜುಗೊಳ್ಳುತ್ತಿದ್ದಂತೆ, ವಿಮಾನದ ಸ್ವತ್ಛತಾ ಸಿಬ್ಬಂದಿ ವೈರಿಂಗ್‌ ಬೋರ್ಡ್‌ನಲ್ಲಿ ಏನೋ ವ್ಯತ್ಯಾಸವಾಗಿರುವುದನ್ನು ಗಮನಿಸಿದರು. ಆ ಬಳಿಕ ಕಸ್ಟಮ್ಸ್‌ ಅಧಿಕಾರಿಗಳು ಶೌಚಾಲಯದ ವೈರಿಂಗ್‌ ಬೋರ್ಡ್‌ ಪರೀಕ್ಷಿಸಿದಾಗ ಕಳ್ಳರ ಕೈಚಳಕ ಪತ್ತೆಯಾಗಿದೆ.

ಸಿಬಂದಿಯ ಸಹಾಯದ ಶಂಕೆ
ವಿಮಾನದಲ್ಲಿ ಪ್ರಯಾಣಿಸುವ ಮಾರ್ಗ ಮಧ್ಯದಲ್ಲಿಯೇ ನುರಿತ ಕಳ್ಳರೇ ಈ ಕೃತ್ಯವನ್ನು ಎಸಗಿರಬಹುದೆಂದು ಅಧಿಕಾರಿಗಳು ಶಂಕೆ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ, ಚಿನ್ನದ ಬಿಲ್ಲೆಗಳನ್ನು ವಿಮಾನದ ಸಿಬಂದಿ ಅಥವಾ ಸ್ವತ್ಛತಾ ಸಿಬಂದಿ ಸಹಾಯದಿಂದಲೇ ವಿಮಾನದೊಳಗೆ ತಂದು ಅಳವಡಿಸಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

ಪ್ರಯಾಣಿಕರ ಪ್ರಾಣದೊಟ್ಟಿಗೆ ಚೆಲ್ಲಾಟ
ಕಳ್ಳರು ಚಿನ್ನದ ಬಿಲ್ಲೆ ಅಡಗಿಸಿಟ್ಟಿರುವ ವೈರಿಂಗ್‌ ಬೋರ್ಡ್‌ನಲ್ಲಿ ಸ್ಮೋಕ್‌ ಸೆನ್ಸಾರ್‌ ಮತ್ತು ಫ್ಯಾನ್‌ ಹಾಗೂ ಲೈಟಿಂಗ್‌ಗೆ ಸಂಬಂಧಿಸಿದ್ದ ವೈರ್‌ಗಳಿದ್ದವು. ಒಂದು ವೇಳೆ ಅಚಾನಕ್ಕಾಗಿ ಏನಾದರೂ ಬೇರೆ ವೈರ್‌ಗಳು ಹಾನಿಗೊಳಗಾಗಿದ್ದರೆ, ಪ್ರಯಾಣಿಕರ ಪ್ರಾಣಕ್ಕೂ ಕುತ್ತಾಗುತ್ತಿತ್ತು ಎಂದು ವಿಮಾನದ ಪೈಲಟ್‌ ಕಳವಳ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next