Advertisement

ಬಾರದ ಸಿಎಂ: ಸಂತ್ರಸ್ತರಲ್ಲಿ ನಿರಾಶೆ

01:01 PM Sep 01, 2019 | Team Udayavani |

ಕಾರವಾರ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕಾರವಾರ ಭೇಟಿ ಹವಾಮಾನ ವೈಪರಿತ್ಯದಿಂದ ರದ್ದಾಗಿದೆ. ಕರಾವಳಿಯಲ್ಲಿ ಬೀಳುತ್ತಿದ್ದ ಮಳೆ ಹಾಗೂ ಮೋಡ ಕವಿದ ವಾತಾವರಣ ಹೆಲಿಕಾಪ್ಟರ್‌ ಇಳಿಯಲು ಸೂಕ್ತವಲ್ಲ ಎಂದು ಪೈಲೆಟ್ ಹೇಳಿದ ಕಾರಣ ಬಿಎಸ್‌ವೈ ಉತ್ತರ ಕನ್ನಡ ಜಿಲ್ಲೆಯ ಭೇಟಿ ಮುಂದೂಡಲ್ಪಟ್ಟಿತು.

Advertisement

ನೆರೆ ಪ್ರದೇಶಗಳಿಗೆ ಭೇಟಿ ಹಾಗೂ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಲು ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿತ್ತು.

ನೆರೆ ಪ್ರದೇಶದ ಛಾಯಚಿತ್ರಗಳ ಪ್ರದರ್ಶನ ಸಹ ಡಿಸಿ ಕಚೇರಿ ಕಾರಿಡಾರ್‌ನಲ್ಲಿ ಏರ್ಪಟ್ಟಿತ್ತು. ನೆರೆ ಕುರಿತಾದ ಐದು ನಿಮಿಷದ ಸಾಕ್ಷ್ಯಚಿತ್ರವನ್ನು ಸಿಎಂ ಎದುರು ಪ್ರದರ್ಶಿಸಲು ವಿಜುವಲ್ಸ್ ಬಳಸಿ ಧ್ವನಿ ನೀಡಿ ತಯಾರಿಸಲಾಗಿತು. ಆದರೆ ಶನಿವಾರ ಬೆಳಗಿನಿಂದಲೇ ಸುರಿದ ಭಾರೀ ಮಳೆಯ ಕಾರಣ ಮುಖ್ಯಮಂತ್ರಿಗಳ ಭೇಟಿ ರದ್ದಾಗಿದೆ.

ಶಾಸಕರು ಕಾಯುತ್ತಿದ್ದರು: ಶಾಸಕರಾದ ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಸುನೀಲ್ ನಾಯ್ಕ ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ಬೆಳಗಿನಿಂದಲೇ ಕಾಯುತ್ತಿದ್ದರು. ಜಿಲ್ಲಾಧಿಕಾರಿ ಹರೀಶ್‌ ಕುಮಾರ್‌, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಷ್‌ ಮುದ್ಗಲ್ ಸಜ್ಜಾಗಿದ್ದರು. ಕುಮಟಾದ ಖೈರೆ, ಕಾರವಾರದ ಗೋಟೆಗಾಳಿ, ಕದ್ರಾ ಗ್ರಾಮಗಳಿಗೆ ಮುಖ್ಯಮಂತ್ರಿಗಳನ್ನು ಕರೆದುಕೊಂಡು ಹೋಗಲು ಸಕಲ ಸಿದ್ಧತೆಗಳು ನಡೆದಿದ್ದವು. ಆದರೆ ಪ್ರಕೃತಿ ಮುನಿದ ಕಾರಣ ಮುಖ್ಯಮಂತ್ರಿಗಳ ಭೇಟಿ ಎರಡನೇ ಸಲ ರದ್ದಾದಂತಾಗಿದೆ.

ನಿರಾಶರಾದ ಕಾರ್ಯಕರ್ತರು: ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಸಿಎಂ ಆಗಮನಕ್ಕೆ ಕಾದಿದ್ದರು. ಶನಿವಾರ ಬೆಳಗಿನ 8 ರಿಂದ ಮಧ್ಯಾಹ್ನ 12ರ ವರೆಗೆ ಸಿಎಂ ಬರುತ್ತಾರೆಂದು ಕಾಯಲಾಯಿತು. ಆದರೆ ಅಂತಿಮವಾಗಿ ಮೋಡಗಳ ಹಿನ್ನೆಲೆಯಲ್ಲಿ ರದ್ದಾಯಿತು. ಅಂಕೋಲಾದ ಡೊಂಗ್ರಿಯಿಂದ ಭಾರತೀಯ ಕಿಸಾನ್‌ ಸಂಘದ ಪದಾಧಿಕಾರಿಗಳು ಬಂದಿದ್ದರು. ಬಿಜೆಪಿ ಜಿಪಂ ಸದಸ್ಯರು, ನಗರಸಭೆ ಸದಸ್ಯರು, ನಗರ ಘಟಕದ ಅಧ್ಯಕ್ಷರು, ಅಂಕೋಲಾ ಬಿಜೆಪಿ ಪ್ರಮುಖರು ಬಂದಿದ್ದರು. ಸಿಎಂ ಬಾರದಿದ್ದಾಗ ಅವರ ಅರ್ಪಣೆಗೆ ತಂದಿದ್ದ ಹೂ ಬೊಕ್ಕೆಗಳನ್ನು ಹಿಡಿದು ನಿರಾಶೆಯಿಂದ ಮನೆಯತ್ತ ಹೆಜ್ಜೆ ಹಾಕಿದರು.

Advertisement

ನಿರಾಶ್ರಿತರಲ್ಲಿ ನಿರಾಶೆ: ಮುಖ್ಯಮಂತ್ರಿ ಕಾರವಾರ ಭೇಟಿ ಯೋಗವಿಲ್ಲ ಎಂದು ಅಂಕೋಲಾ ಕಡೆಯವರು ಗೊಣಗಿದರು. ಗೋಟೆಗಾಳಿ ಮತ್ತು ಕದ್ರಾ ಜನ ಸಿಎಂ ಆಗಮನದ ನಿರೀಕ್ಷೆಯಲ್ಲಿದ್ದರು. ಆದರೆ ಅವರು ಬರುವುದಿಲ್ಲ ಎಂದಾಕ್ಷಣ ತೀವ್ರ ನಿರಾಶೆಗೆ ಒಳಗಾದರು. ಕಣ್ಣಂಚಲ್ಲಿ ಮಡುಗಟ್ಟಿದ ದುಃಖ ಕಟ್ಟೆಯೊಡೆಯಿತು. ಸರ್ಕಾರ ನಮ್ಮ ನೆರೆವಿಗೆ ಬರಲಿದೆಯೇ ಎಂಬ ಅನುಮಾನ ಅವರನ್ನು ಕಾಡಿತು.

Advertisement

Udayavani is now on Telegram. Click here to join our channel and stay updated with the latest news.

Next