ಬಾಗಲಕೋಟೆ: ಜಿಪಂ ಮಾಸಿಕ ಕೆಡಿಪಿ ಸಭೆಗೆ ಅನುಮತಿ ಪಡೆಯದೇ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಜಿಪಂ ಸಿಇಒಗೆ ಸೂಚಿಸಿದರು.
ಜಿಪಂ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ಸಭೆಗೆ ಸ್ವತಃ ಅಧಿಕಾರಿಗಳೇ ಹಾಜರಾಗಬೇಕು. ಅನಿವಾರ್ಯ ಕಾರಣಗಳಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆದು ತಮ್ಮ ಪ್ರತಿನಿಧಿಗಳನ್ನು ಕಳುಹಿಸಬೇಕು. ಇಲ್ಲವಾದಲ್ಲಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು.
ನಂತರ ಕಳೆದ ಜೂನ್ ಮಾಹೆಯ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ನಡುವಳಿಗಳ ಮೇಲಿನ ಅನುಸರಣಾ ವರದಿ ಬಗ್ಗೆ ಚರ್ಚಿಸಲಾಯಿತು. ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಪ್ರಧಾನಮಂತ್ರಿ ಕೃಷಿ ಸಂಚಾಯಿ ಯೋಜನೆಗಳ 2018-19ನೇ ಸಾಲಿನಲ್ಲಿ ಒಟ್ಟು 157 ಫಲಾನುಭವಿಗಳು ಪ್ರಯೋಜನ ಪಡೆದಿದ್ದು, ಬೀಜ ವಿತರಣೆ ವೇಳೆಯಲ್ಲಿ ಜನಪ್ರತಿನಿದಿಗಳ ಗಮನಕ್ಕೆ ತರಲು ಆಯಾ ತಾಲೂಕಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ಪ್ರಭುರಾಜ ಹಿರೇಮಠ ತಿಳಿಸಿದರು. ನೆಡತೋಪು ನಿರ್ಮಾಣ, ನಿರ್ವಹಣೆ ಹಾಗೂ ಕಾಮಗಾರಿಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸ್ವಚ್ಛಮೇವ ಜಯತೆ ಆಂದೋಲನದಡಿ ವೈಯಕ್ತಿಕ ಶೌಚಾಲಯಗಳ ಬಳಕೆ ಮತ್ತು ಸುಸ್ಥಿರತೆ ಕುರಿತು ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೇಸ್‌ಲೈನ್ ಸಮೀಕ್ಷೆಯಿಂದ ಹೊರಗುಳಿದ ಕುಟುಂಬಗಳಿಗೆ ಶೌಚಾಲಯದ ಸೌಲಭ್ಯ ನೀಡಲಾಗುತ್ತಿದ್ದು, ಇಲ್ಲಿವರೆಗೆ 2269 ಕುಟುಂಬಗಳಿಗೆ ಪ್ರೋತ್ಸಾಹಧನ ನೀಡಲಾಗಿದೆ. ಇನ್ನುಳಿದ ಕುಟುಂಬಗಳಿಗೆ ಸೆಪ್ಟೆಂಬರ್ ಮಾಹೆಯ ಅಂತ್ಯಕ್ಕೆ ಶೌಚಾಲಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಭೆಗೆ ತಿಳಿಸಲಾಯಿತು.
ಜಿಲ್ಲೆಯಲ್ಲಿ ಒಟ್ಟು 158 ಕೆರೆಗಳು ಇರುವ ಬಗ್ಗೆ ಸಮೀಕ್ಷೆಯಿಂದ ಮಾಹಿತಿ ಪಡೆಯಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಕೆರೆ ಸಂಜೀವಿನಿ, ಜಲಾಮೃತ ಯೋಜನೆಯಡಿ ಬಾದಾಮಿ, ಹುನಗುಂದ, ಬೀಳಗಿ ಮತ್ತು ಮುಧೋಳ ತಾಲೂಕಿನ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಕಾರ್ಯನಿವಾಹಕ ಅಭಿಯಂತರ ವಿಜಯಕುಮಾರ ತಿಳಿಸಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ರಾತ್ರಿ ವೇಳೆಯಲ್ಲಿ 4 ಜನ ಸ್ತ್ರೀರೋಗ ತಜ್ಞರು ಕಾರ್ಯನಿರ್ವಹಿಸುತ್ತಿದ್ದು, ಸಿಜರಿನ್ ಮಾಡುವ ವ್ಯವಸ್ಥೆ ಕೈಗೊಳ್ಳಲಾಗಿದೆ. ತಾಲೂಕ ಮಟ್ಟದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡದಂತೆ ಅರಿವು ಮೂಡಿಸುವ ಕಾರ್ಯಕ್ರಮ, ಪ್ರತಿ ತಿಂಗಳು ಜಿಲ್ಲಾ ಕುಷ್ಟರೋಗ ಅಧಿಕಾರಿಗಳು ಕುಷ್ಟರೋಗಗಳಿಗೆ ಕಾಲೋನಿಗಳಿಗೆ ಭೇಟಿ ನೀಡಿ ಉಪಚಾರ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಅನಂತ ದೇಸಾಯಿ ಸಭೆಗೆ ತಿಳಿಸಿದರು.
ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಸಿಇಒ ಮೊಹ್ಮದ ಇಕ್ರಮ್‌ಮುಲ್ಲಾ ಶರೀಫ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ದಡ್ಡಿ, ಶಿಕ್ಷಣ ಮತ್ತು ಆರೋಗ್ಯ ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಸಿಂಗಾಡೆ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಪಾಟೀಲ, ಜಿಪಂ ಉಪಕಾರ್ಯದರ್ಶಿ ಎ.ಜಿ.ತೋಟದ, ಯೋಜನಾ ನಿರ್ದೇಶಕ ವಿ.ಎಸ್.ಹಿರೇಮಠ, ಮುಖ್ಯಲೆಕ್ಕಾಧಿಕಾರಿ ಶಾಂತಾ ಕಡಿ ಉಪಸ್ಥಿತರಿದ್ದರು.