Advertisement

ನೀತಿ ಆಯೋಗ ಸಭೆಗೆ ಗೈರಾಗಿ ರಾಜ್ಯಕ್ಕೆ ಅನ್ಯಾಯವೆಸಗಿದ ಸಿಎಂ: ಬೊಮ್ಮಾಯಿ

05:03 PM Jul 29, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಬೇಕಾದ ಯೋಜನೆಗಳ ಕುರಿತು ಚರ್ಚಿಸುವ ನೀತಿ ಆಯೋಗದ ಸಭೆಗೆ ಗೈರು ಹಾಜರಾಗುವ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

Advertisement

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈಲ್ವೆ ಸೇರಿದಂತೆ ಪ್ರಮುಖ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಕೊಡದೇ ಕೇಂದ್ರ ಸರ್ಕಾರದ ವಿರುದ್ಧ ಅಸಹಕಾರ ತೋರುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದವರು ಅಪಪ್ರಚಾರದಲ್ಲಿ ನಿಸ್ಸೀಮರು. ಕೇಂದ್ರದ ಮೇಲೆ ನಿರಂತರವಾಗಿ ಆಪಾದನೆ ಮಾಡುವುದು ಅವರಿಗೆ ಚಟವಾಗಿದೆ. ಕಾಂಗ್ರೆಸ್‌ ಪಕ್ಷದವರು ಅಪಪ್ರಚಾರ ಮಾಡುವ ಮೂಲಕ ರಾಜ್ಯದ ಜನರ ದಾರಿ ತಪ್ಪಿಸುತ್ತಿದ್ದಾರೆಂದು ವಾಗ್ಧಾಳಿ ನಡೆಸಿದರು.

ಈ ಬಾರಿ ರಾಜ್ಯದ ರೈಲ್ವೆ ಯೋಜನೆಗಳಿಗೆ 7,329 ಕೋಟಿ ರೂಪಾಯಿ ಕೊಟ್ಟಿದ್ದೇವೆ. ಕಳೆದ ಬಾರಿ ಅದರ ಹಿಂದಿನ ಬಾರಿಯೂ 7 ಸಾವಿರ ಕೋಟಿ ಕೊಡಲಾಗಿತ್ತು. ಯುಪಿಎ ಕಾಲದಲ್ಲಿ ವರ್ಷಕ್ಕೆ ಕೇವಲ 600 ಕೋಟಿ ಕೊಟ್ಟಿದ್ದರು. ಈಗ ಅದರ 10 ಪಟ್ಟು ಹೆಚ್ಚು ಕೊಟ್ಟರೂ ಕೇಂದ್ರದಿಂದ ಏನೂ ಸಿಗುತ್ತಿಲ್ಲ ಎಂದು ಆರೋಪಿಸುತ್ತಾರೆ. ರಾಜ್ಯ ಸರ್ಕಾರ ತನ್ನ ಪಾಲಿನ ಮ್ಯಾಚಿಂಗ್‌ ದುಡ್ಡು ಕೊಟ್ಟಿಲ್ಲ.

ಭೂ ಸ್ವಾಧೀನ ಮಾಡಿಲ್ಲ. ರಾಜ್ಯ ಸರ್ಕಾರ ಕೇಂದ್ರದ ಜತೆಗೆ ಅಸಹಕಾರ ಮಾಡುತ್ತಿದೆ. ರಾಜ್ಯದ ಬೆಳೆವಣಿಗೆ, ಅಭಿವೃದ್ಧಿ, ಹಿತ ಕಾಪಾಡಲು ರಾಜ್ಯ ಸರ್ಕಾರ ತಯಾರಿಲ್ಲ ಎಂದರು.

ಸಾಗರ ಮಾಲಾ ಯೋಜನೆಯಲ್ಲಿ 700 ಕೋಟಿ ರೂ. ಬರುತ್ತದೆ. ಬಂಡವಾಳ ಹೂಡಿಕೆಗೆ 6,280 ಕೋಟಿ ರೂಪಾಯಿ ಬಜೆಟ್‌ನಲ್ಲಿ ಕೊಟ್ಟಿದ್ದೇವೆ. ಕೇಂದ್ರ ಸರ್ಕಾರ ರಾಜ್ಯಗಳಿಗೆ ಶೂನ್ಯ ಬಡ್ಡಿಯಲ್ಲಿ 50 ವರ್ಷದ ನಂತರ ತೀರಿಸಲು ಸಾಲ ನೀಡುತ್ತದೆ.

Advertisement

ಅದು ಕೂಡ ಬಹುತೇಕ ಅನುದಾನ ಇದ್ದ ಹಾಗೆ ವಿಪತ್ತು ನಿರ್ವಹಣೆಗೆ 6,396 ಕೋಟಿ ರೂಪಾಯಿ ಕೊಟ್ಟಿದೆ. ಇದಲ್ಲದೇ ರಸ್ತೆಗೆ, ಪಿಎಂ ಆವಾಸ್‌, ಗ್ರಾಮ್‌ ಸಡಕ್‌ ಯೋಜನೆ ಸೇರಿದಂತೆ ಕೇಂದ್ರದ ಹಲವಾರು ಯೋಜನೆಯಲ್ಲಿ ರಾಜ್ಯಕ್ಕೆ ಹಣ ಬರುತ್ತಿದೆ. ಬಂದ ಹಣ ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕಿದೆ ಎಂದರು.

ರಾಜ್ಯ ಸರ್ಕಾರಕ್ಕೆ ಮ್ಯಾಚಿಂಗ್‌ ಗ್ರ್ಯಾಂಟ್‌ ಕೊಡಲು ರಾಜ್ಯ ಸರ್ಕಾರ ಬಳಿ ಹಣ ಇಲ್ಲ. ಹೀಗಾಗಿ ಅಪಪ್ರಚಾರ ಮಾಡುತ್ತಿದೆ. ಇದು ಅತ್ಯಂತ ಖಂಡನೀಯ. ರಾಜ್ಯದ ಜನರಿಗೆ ಇದು ಗೊತ್ತಿದ್ದೆ ಎಂಪಿ ಚುನಾವಣೆಯಲ್ಲಿ ಸೋಲಿಸಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ಉಳಿತಾಯ ಬಜೆಟ್‌ ಮಂಡನೆ ಮಾಡಿದ್ದೆವು. ಈಗ ಕೊರತೆ ಬಜೆಟ್‌ ಮಾಡಿದ್ದಾರೆ.1,631 ಕೋಟಿ ರೂ. ಕೊರತೆ ಬಜೆಟ್‌ ಮಂಡಿಸಿದ್ದಾರೆ ಎಂದು ಹೇಳಿದರು.

ಮಾಫಿಯಾಗೆ ಕಡಿವಾಣ ಹಾಕಬೇಕಿದೆ..
ಇನ್ನು ರೈಲುಗಳ ಮೂಲಕ ಬೆಂಗಳೂರಿಗೆ ಬರುವ ಮಾಂಸದ ಕುರಿತು ಗೃಹ ಸಚಿವ ಡಾ|ಜಿ.ಪರಮೇಶ್ವರ್‌ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗೃಹ ಸಚಿವರಿಗೆ ವೆಟರ್ನರಿ ಜ್ಞಾನ ಇದೆ ಅಂತಾ ನನಗೆ ಗೊತ್ತಿರಲಿಲ್ಲ. ಬಾಕ್ಸ್‌ನಲ್ಲಿ ಸಿಕ್ಕಿರುವ ಮಾಂಸ ಯಾವುದು ಅಂತಾ ತಜ್ಞರೇ ಹೇಳಬೇಕು. ಇದು ಜನಸಾಮಾನ್ಯರ ಆರೋಗ್ಯದ ಪ್ರಶ್ನೆ. ಈ ಬಗ್ಗೆ ತಜ್ಞರೇ ಪರಿಶೀಲಿಸಿ ಹೇಳಬೇಕು. ಅಲ್ಲಿವರೆಗೂ ಯಾರೇ ಏನೇ ಮಾತನಾಡಿದರೂ ಅದಕ್ಕೆ ಅರ್ಥ ಇಲ್ಲ. ಈಗಾಗಲೇ ಕಡಿಮೆ ದರಕ್ಕೆ ಸಿಗುತ್ತದೆ ಅಂತಾ ಏನು ಬೇಕಾದರೂ ತಿನ್ನಿಸುವ ಹುನ್ನಾರ ನಡೆಯುತ್ತಿದೆ. ಮೊದಲಿನಿಂದಲೂ ಇದೊಂದು ಮಾಫಿಯಾ ರೀತಿ ನಡೆಯುತ್ತಿದೆ. ಅದನ್ನು ಸರ್ಕಾರ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next