Advertisement

ಅ.4ರಂದು ಕೋರ್ಟ್‌ ಕಲಾಪಕ್ಕೆಗೈರು: ಬಾರ್‌ ಕೌನ್ಸಿಲ್‌ ನಿರ್ಣಯ

12:42 PM Sep 28, 2017 | Team Udayavani |

ಬೆಂಗಳೂರು: ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿ ಜಯಂತ್‌ ಪಟೇಲ್‌ರನ್ನು ಏಕಾಏಕಿ ವರ್ಗಾವಣೆ ಮಾಡಿ ರುವುದನ್ನು ಖಂಡಿಸಿರುವ ರಾಜ್ಯ ವಕೀಲರ ಪರಿಷತ್‌, ನ್ಯಾಯಾಂಗ ವ್ಯವಸ್ಥೆಯ ಸ್ವತಂತ್ರ ಕಾರ್ಯನಿರ್ವಹಣೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಅಕ್ಟೋಬರ್‌ 4ರಂದು ಕೋರ್ಟ್‌ ಕಲಾಪಗಳಿಂದ ದೂರ ಉಳಿದು ಪ್ರತಿಭಟಿಸು ವುದಾಗಿ ತಿಳಿಸಿದೆ. ನ್ಯಾ.ಜಯಂತ್‌ ಪಟೇಲ್‌ರ ವರ್ಗಾವಣೆ ಸಂಬಂಧ ರಾಜ್ಯ ವಕೀಲರ ಪರಿಷತ್‌ ಬುಧವಾರ ತುರ್ತು ಸಭೆ ನಡೆಸಿ ಈ ನಿರ್ಣಯ ಅಂಗೀಕರಿಸಿದೆ ಎಂದು ಪರಿಷತ್‌ನ ಉಪಾಧ್ಯಕ್ಷ ವೈ.ಆರ್‌.ಸದಾಶಿವರೆಡ್ಡಿ ತಿಳಿಸಿದ್ದಾರೆ.

Advertisement

ಹಿರಿಯ ನ್ಯಾಯಮೂರ್ತಿ ಆಗಿದ್ದ ಜಯಂತ್‌ ಪಟೇಲ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಥವಾ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಆಗಬೇಕಿತ್ತು. ಆದರೆ, ನ್ಯಾಯಾಂಗ ವ್ಯವಸ್ಥೆ ಅವರನ್ನು ನಡೆಸಿಕೊಂಡಿರುವ ರೀತಿಗೆ ಬೇಸರಗೊಂಡು ರಾಜೀನಾಮೆ ನೀಡಿದ್ದಾರೆ. ನ್ಯಾ.ಜಯಂತ್‌ ಪಟೇಲ್‌ ದಿಢೀರ್‌ ವರ್ಗಾವಣೆ, ಖಾಲಿ ಹುದ್ದೆಗಳ ನೇಮಕಕ್ಕೆ ವಿಳಂಬ, ನ್ಯಾಯಮೂರ್ತಿಗಳ ನೇಮಕ, ವರ್ಗಾವಣೆ ವಿಚಾರಗಳಲ್ಲಿ ಸರ್ಕಾರಗಳ ಹಸ್ತ ಕ್ಷೇಪ ಸೇರಿದಂತೆ ಇತ್ತೀಚಿನ ಕೆಲವು ಬೆಳವಣಿಗೆಗಳು ನ್ಯಾಯಾಂಗ ವ್ಯವಸ್ಥೆಯಲ್ಲಿನ ಲೋಪಗಳನ್ನು ಎತ್ತಿತೋರಿಸುತ್ತಿವೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಪಾರದರ್ಶಕತೆ ತರಬೇಕು: ಈ ನಿಟ್ಟಿನಲ್ಲಿ ಕೊಲಿಜಿಯಂ ವ್ಯವಸ್ಥೆಯಲ್ಲಿ ಶಾಸಕಾಂಗದ ಪಾತ್ರವನ್ನು ಕುಗ್ಗಿಸಿ, ಮತ್ತಷ್ಟು ಪಾರದರ್ಶಕತೆ, ನ್ಯಾಯಾಂಗ ವ್ಯವಸ್ಥೆಯ ಘನತೆ ಹಾಗೂ ವಿಶ್ವಾಸಾರ್ಹತೆ ಎತ್ತಿಹಿಡಿಯುವ ಅನಿವಾರ್ಯತೆಯಿದೆ. ಎಂದು ನಿರ್ಣಯದ ಪತ್ರದಲ್ಲಿ ತಿಳಿಸಿದ್ದಾರೆ.

32 ನ್ಯಾಯಮೂರ್ತಿ ಹುದ್ದೆ ಖಾಲಿ! ರಾಜ್ಯ ಹೈಕೋರ್ಟ್‌ನಲ್ಲಿ 62 ನ್ಯಾಯಮೂರ್ತಿಗಳ ಹುದ್ದೆಯಿವೆ. ಆದರೆ, ಹಾಲಿ 25 ನ್ಯಾಯಮೂರ್ತಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 32 ಹುದ್ದೆಗಳು ಖಾಲಿಯಾಗಿವೆ. ಕೇಂದ್ರ ಸರ್ಕಾರ ನ್ಯಾಯಮೂರ್ತಿಗಳ ಹುದ್ದೆಗಳನ್ನು ಭರ್ತಿ ಮಾಡಲು ವಿಳಂಬ ಧೋರಣೆ ಅನುಸರಿಸುತ್ತಿರುವುದು ಬೇಸರ ತಂದಿದೆ ಎಂದು ವಕೀಲರ ಪರಿಷತ್‌ ಅಸಮಾಧಾನ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next