Advertisement
ದ.ಕ.ದಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್ಜಲದ ಪ್ರಮಾಣ ಇಳಿ ಮುಖವಾಗುತ್ತಿದೆ. ಜಿಲ್ಲೆಯಾದ್ಯಂತ ಕೃಷಿ, ಗೃಹೋಪಯೋಗ, ಕೈಗಾರಿಕಾ ಉಪಯೋಗಕ್ಕಾಗಿ ಬೋರ್‌ವೆಲ್ ಕೊರೆ ಯಲಾಗುತ್ತದೆ. ನೀರಿನ ಸಮಸ್ಯೆ ಕಂಡುಬಂದ ವೇಳೆ ಭೂಗರ್ಭದ ನೀರಿನತ್ತ ಚಿತ್ತ ಹರಿಸಲಾಗುತ್ತಿದೆ. ಪರಿಣಾಮ ಭೂಮಿಯೊಳಗಿನ ನೀರಿನ ಸ್ಥಿರ ಮಟ್ಟದಲ್ಲೂ ಇಳಿಕೆಯಾಗುತ್ತಿದೆ. 2021ರಲ್ಲಿ 11.99 ಮೀ. ಆಳದಲ್ಲಿದ್ದ ಸ್ಥಿರಮಟ್ಟ 2023ರಲ್ಲಿ ಬರೋಬ್ಬರಿ 21 ಮೀ. ಆಳಕ್ಕೆ ತಲುಪಿದೆ. ಈ ಸಾಲಿನಲ್ಲಿ ಜನವರಿ ಅಂತ್ಯದ ವರೆಗೆ 15.23 ಮೀ.ನಲ್ಲಿದ್ದು ಮೇಯಲ್ಲಿ ಮತ್ತಷ್ಟು ಆಳಕ್ಕೆ ಇಳಿಯುವ ಆತಂಕ ಇದೆ.
ಅಂತರ್ಜಲ ಇಲಾಖೆಯಿಂದ ನೀರಿನ ಮಿತ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಕೈಗಾರಿಕೆಗಳಲ್ಲಿ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಲಾಗಿದೆ. ಇದರಿಂದಾಗಿ ಸರಿಸುಮಾರು 6 ತಿಂಗಳಿಗೆ ಬೇಕಾದ ಮಳೆ ನೀರನ್ನು ಭೂಮಿಯೊಳಗೆ ಟ್ಯಾಂಕ್ ನಿರ್ಮಿಸಿ ಸಂಗ್ರಹಿಸುವ ಮೂಲಕ ಅಂತರ್ಜಲವನ್ನು ಅವಲಂಬಿಸುವುದು ತಪ್ಪುತ್ತದೆ. ಮಂಗಳೂರು ವಿಮಾನ ನಿಲ್ದಾಣ, ಎಚ್‌ಪಿಸಿಎಲ್, ಪುತ್ತೂರಿನ ರೈತ ಬಂಧು ಸೇರಿದಂತೆ ಹತ್ತಕ್ಕೂ ಅಧಿಕ ಸಂಸ್ಥೆಗಳು ಮಳೆನೀರು ಕೊಯ್ಲು ಮೂಲಕ ನೀರು ಸಂಗ್ರಹ ಕಾರ್ಯ ನಡೆಸುತ್ತಿವೆ.
Related Articles
Advertisement
ಹಿತ ಮಿತ ಬಳಕೆ ಅಗತ್ಯಹರಿಯುವ ನೀರನ್ನು ನಿಲ್ಲಿಸಬೇಕು. ನಿಂತ ನೀರನ್ನು ಇಂಗಿಸಬೇಕು. ಅಂತರ್ಜಲ ಅತಿಯಾಗಿ ಬಳಕೆಯ ಮೇಲೆ ನಿಯಂತ್ರಣವಿರಬೇಕು. ಬೋರ್‌ವೆಲ್‌ಗಳನ್ನು ಮರುಪೂರಣಗೊಳಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ವಿವೇಚನಾ ರಹಿತವಾಗಿ ಅಂತರ್ಜಲ ಬಳಸಲಾಗುತ್ತಿದ್ದು ಇದಕ್ಕೆ ಮಿತಿ ಇರಬೇಕು. ರೈತರು ಮಳೆಯಾಧಾರಿತ ಬೆಳೆಗಳನ್ನು ಬೆಳೆಸುತ್ತ ಹೆಚ್ಚು ಆಸಕ್ತಿ ವಹಿಸಬೇಕು. ನೀರನ್ನು ನಿಯಮಿತ ಹಾಗೂ ನ್ಯಾಯಯುತವಾಗಿ ಬಳಸಬೇಕು. ಕೊಳವೆ ಬಾವಿ ಕೊರೆಯುವುದಕ್ಕೆ ತಡೆಯೊಡ್ಡುವುದಾಗಲಿ, ಇಂತಿಷ್ಟೇ ಅಡಿ ಕೊರೆಯಬೇಕೆನ್ನುವ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ. ಜನರಾಗಿಯೇ ಮುಂದೆ ಎದುರಾಗಬಹುದಾದ ನೀರಿನ ಕ್ಷಾಮದ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಮುಂದಿನ ತಲೆಮಾರು ಜಲ ಕ್ಷಾಮದಿಂದ ದೂರ ಉಳಿಯಬೇಕೆಂದರೆ, ಇಂದು ಎಚ್ಚರವಹಿಸಬೇಕು. ಅನಗತ್ಯ ಪೋಲು ಮಾಡದೆ ಅಗತ್ಯಕ್ಕೆ ತಕ್ಕಷ್ಟು ಮಾತ್ರವೇ ಬಳಸುವುದು ಜಲ ಸಂರಕ್ಷಣೆಯ ಭಾಗವಾಗುತ್ತದೆ.
-ಶೇಖ್ ದಾವೂದ್, ಹಿರಿಯ ಭೂವಿಜ್ಞಾನಿ -ಸಂತೋಷ್ ಮೊಂತೇರೊ