ಕೋಲ್ಕತಾ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ 6 ತಿಂಗಳು ಜೈಲು ಶಿಕ್ಷೆಗೊಳಗಾಗಿ ತಲೆಮರೆಸಿಕೊಂಡಿರುವ ಕಲ್ಕತ್ತಾ ಹೈಕೋರ್ಟ್ ನ್ಯಾ| ಸಿ.ಎಸ್. ಕರ್ಣನ್ ಸೋಮವಾರ ನಿವೃತ್ತಿ ಹೊಂದಿದ್ದಾರೆ. ಅಚ್ಚರಿ ಎಂದರೆ ಇದೇ ದಿನ ಅವರ ಜನ್ಮ ದಿನವೂ ಆಗಿದೆ. ಸಾಮಾನ್ಯವಾಗಿ ನ್ಯಾಯಾಧೀಶರು ನಿವೃತ್ತಿಯಾದಾಗ, ಹೈಕೋರ್ಟ್‌ನಲ್ಲಿ ಅವರ ಗೌರವಾರ್ಥ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗುತ್ತದೆ. ಆದರೆ ನ್ಯಾ| ಕರ್ಣನ್ ಅವರು ಜೈಲು ಶಿಕ್ಷೆಗೆ ಗುರಿಯಾಗಿರುವುದರಿಂದ ಇದನ್ನು ನಡೆಸಿಲ್ಲ. ದಿನಾಂಕದ ಪ್ರಕಾರ ನ್ಯಾ| ಕರ್ಣನ್ ಅವರ ನಿವೃತ್ತಿ ರವಿವಾರವಾಗಿದ್ದು, ಶುಕ್ರವಾರ ಅವರ ಕೊನೆಯ ಕೆಲಸದ ದಿನವಾಗಿತ್ತು. ಇನ್ನು, ಮೇ.9ರಿಂದ ಅವರು ತಲೆಮರೆಸಿಕೊಂಡಿದ್ದಾರೆ. ಅದಕ್ಕೂ ಮೊದಲೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧವೇ ಬಂಧನಕ್ಕೆ ಆದೇಶಿಸಿ ಸುದ್ದಿಯಾಗಿದ್ದರು. ಅದಕ್ಕೂ ಮೊದಲೇ ನ್ಯಾ| ಕರ್ಣನ್ ಅವರಿಂದ ಸುಪ್ರೀಂ ಕೋರ್ಟ್ ನ್ಯಾಯಿಕ ಕಲಾಪ ನಡೆಸುವುದಕ್ಕೆ ನಿಷೇಧ ಹೇರಿತ್ತು. ಇದೀಗ ನ್ಯಾ| ಕರ್ಣನ್ ನಿವೃತ್ತಿ ಹೊಂದಿದ್ದರೂ, ಅವರ ನಿವೃತ್ತಿ ಬಳಿಕದ ಕಾಗದ ಪತ್ರಗಳು ಕೋರ್ಟ್‌ನಲ್ಲಿ ಇನ್ನೂ ಸಿದ್ಧಗೊಂಡಿಲ್ಲ. ಕೋರ್ಟ್‌ಗೆ ಅವರು ಹಾಜರಾಗದೇ ತಿಂಗಳುಗಳೇ ಕಳೆದಿವೆ. ಅವರ ನಿವಾಸವೂ ಬಿಕೋ ಎನ್ನುತ್ತಿದ್ದು, ಇದುವರೆಗೂ ಅವರು ಎಲ್ಲಿದ್ದಾರೆ ಎಂದು ತಿಳಿದುಬಂದಿಲ್ಲ. ಪ.ಬಂಗಾಲ ಪೊಲೀಸರು ಬಂಧನಕ್ಕಾಗಿ ಈಗಲೂ ಹುಡುಕುತ್ತಿದ್ದಾರೆ.