ಮಳೆ ಒಂದೇ ಸಮನೆ ಸುರಿಯುತ್ತಿತ್ತು. ನಾನು ನನ್ನ ಗೆಳತಿಯರೊಂದಿಗೆ ಬ್ಯಾಗ್ ಅನ್ನು ಎದೆಗವಚಿಕೊಂಡು ಒಂದು ಕೊಡೆಯಲ್ಲಿ ಇಬ್ಬರು ಎಂಬಂತೆ ನಾಲ್ಕು ಜನ ಬರುತ್ತಿದ್ದೆವು. ನಾನು ನನ್ನ ಕಣ್ಣನ್ನು ಅತ್ತ-ಇತ್ತ ಸರಿಸಿದಾಗ ಕಣ್ಣಿಗೆ ಕಂಡದ್ದು ಮಳೆಯಲ್ಲಿ ನೆನೆಯುತ್ತಿದ್ದ ಆ ಹುಡುಗ. ಪ್ಯಾಂಟ್‌ನ್ನು ಮೊಣಕಾಲವರೆಗೆ ಮಡಚಿಕೊಂಡು ಇದ್ದಬದ್ದ ಹುಡುಗಿಯರ ಬಳಿ ಕೊಡೆ ಕೇಳಿಕೊಂಡು, ಅರ್ಧ ಒದ್ದೆಯಾಗಿ, ತನ್ನ ಹೇರ್ ಸ್ಟೈಲ್ ಎಲ್ಲಿ ಹಾಳಾಗುತ್ತೋ ಅಂತ ಕೈಯಲ್ಲಿ ಸರಿಮಾಡಿಕೊಂಡು ನಿಂತಿದ್ದನು. ಬೆಳಗ್ಗೆ ಬರುವಾಗ ಹೀರೊ ಆಗಿದ್ದವನು, ಸಂಜೆ ಮಳೆಯಲ್ಲಿ ನೆನೆದು ಕಾಮಿಡಿ ಪೀಸ್‌ನಂತೆ ಕಾಣುತ್ತಿದ್ದ.
ಕೈಯಲ್ಲಿ ಕೊಡೆಯಿಲ್ಲದೆ ಬ್ಯಾಗ್ ಹಿಡಿದು, ಬೈಕ್‌ನ ಕಡೆ ಓಡುತ್ತಿದ್ದ. ಕೂದಲು ಕೆದರಿ ಒಳ್ಳೆಯ ಕೋಳಿಮರಿಯಂತೆ ಕಾಣುತ್ತಿದ್ದ. ಪ್ಯಾಂಟ್ ಪೂರ್ತಿ ಒದ್ದೆಯಾಗಿತ್ತು. ಅವನ ಮುಖದ ಮೇಲೆ ಬಿದ್ದ ನೀರಿನ ಹನಿಗಳು ನನ್ನನ್ನು ಆ ಕ್ಷಣಕ್ಕೆ ಒಮ್ಮೆ ಅಲ್ಲೇ ನಿಂತು ಬಿಡುವಂತೆ ಮಾಡಿತ್ತು. ನನ್ನ ಗೆಳತಿಯರು ಮುಂದೆ ಹೋದದ್ದು ನನಗೆ ಗೊತ್ತೇ ಆಗಲಿಲ್ಲ. ಮಳೆ ಹನಿಗಳು ನನ್ನನ್ನು ಒಂದು ಕ್ಷಣಕ್ಕೆ ಬೆಚ್ಚಿ ಬೀಳಿಸಿದ್ದವು- ಒಂದು ರೀತಿಯಲ್ಲಿ ಯಾತನೆಯ ಕಣ್ಣೀರಿನಂತೆ. ಒಂದು ಮಾತೇ ಇದೆಯಲ್ಲ-ಅತ್ತಾಗ ಗೊತ್ತಾಗಬಾರದು ಎಂದಿದ್ದರೆ ಮಳೆಯಲ್ಲಿ ನೆನೆಯುತ್ತ ಅಳಬೇಕು ! ಮತ್ತೆ ಮುಂದೆ ನಡೆದು ನನ್ನ ಗೆಳತಿಯರನ್ನು ಕೂಡಿಕೊಂಡೆ. ಆದರೂ ನನ್ನ ಮನಸ್ಸಿನಲ್ಲಿ ಅವನ ಮುಖ ಅಚ್ಚಾಗಿ ಹೋಗಿತ್ತು. ಬಸ್ಸು ಹತ್ತಿ ಕುಳಿತ ನನಗೆ ಟಿಕೆಟ್ ಕೊಳ್ಳಲು ಮರೆತೇ ಹೋಗಿತ್ತು. ಕಂಡೆಕ್ಟರ್ ಬಂದು “ಟಿಕೆಟ್ ಟಿಕೆಟ್’ ಎಂದು ಕೂಗಿದಾಗಲೇ ವಾಸ್ತವಕ್ಕೆ ಬಂದಿದ್ದೆ.
ಮತ್ತೆ ಮರುದಿನ ಸಂಜೆ ವರುಣದೇವನನ್ನು ಪ್ರಾರ್ಥಿಸುತ್ತಿದ್ದೆ: “ಇವತ್ತು ನಿನ್ನ ಕೃಪೆ ನನ್ನ ಮೇಲಿರಲಿ’ ಎಂದು. ಅದು ಕೇಳಿಸಿತ್ತೋ ಏನೋ ಮಳೆರಾಯ ದಯೆ ತೋರಿದ್ದ. ಮತ್ತೆ ನನ್ನ ಕಣ್ಣುಗಳ ಆ ಮಳೆ ಹುಡುಗನನ್ನು ಹುಡುಕಾಡಿದವು, ಬೈಕ್ ಇತ್ತು. ಆದರೆ ಅವನು ಕಾಣಿಸಿರಲಿಲ್ಲ. ಪರವಾಗಿಲ್ಲ ಎಂದುಕೊಂಡು ಹೊರಟಿದ್ದೆ.
ಹೀಗೆ ಐದಾರು ದಿನ ಕಳೆದಿದ್ದವು. ಒಮ್ಮೆಗೆ ಕಂಡ ಆ ಮಳೆ ಹುಡುಗ ನನ್ನ ಮನಸ್ಸಿನಿಂದ ಮರೆಯಾಗುತ್ತ ಬಂದ. ಆದರೂ ಪಾರ್ಕಿಂಗ್ ಸ್ಥಳಕ್ಕೆ ಬಂದಾಗ ಬೈಕ್ ಕಡೆಗೊಮ್ಮೆ ಕಣ್ಣು ಹಾಯಿಸುತ್ತೇನೆ. ಬೈಕ್ ಇರುತ್ತಿತ್ತು, ಆದರೆ ಅವನು ಇರುತ್ತಿರಲಿಲ್ಲ. ಇಷ್ಟೊತ್ತಿಗಾಗಲೇ ನನ್ನ ಗೆಳತಿಯರಿಗೆಲ್ಲ ತಿಳಿದು ಹೋಗಿತ್ತು. ಅವರೂ ಹುಡುಕುವ ಪ್ರಯತ್ನ ಮಾಡಿದ್ದರು. ಆದರೂ ಏನು ಪ್ರಯೋಜನವಾಗಿಲ್ಲ. ಕೊನೆೆಗೆ ನಾನೂ ಮರೆತು ಬಿಟ್ಟಿದ್ದೆ. ಕಾಲೇಜು ನೆನಪಾದಾಗಲೆಲ್ಲ ಆ ಮಳೆ ಹುಡುಗನು ನೆನಪಾಗುತ್ತಾನೆ.
ಕಾಲೇಜಿನ ಕೊನೆಯ ಸೆಮಿಸ್ಟರ್ ತಲುಪಿದ್ದ ನಾನು, ಎಲ್ಲಾ ಮರೆತು ಹೊಸ ಪ್ರಪಂಚದೆಡೆಗೆ ತರೆದುಕೊಳ್ಳುವ ಸಮಯ ಬಂದಾಗಿತ್ತು. ಸಂಜೆ ಮನೆಗೆ ಮರಳುವಾಗ ಯಾಕೋ ಗೊತ್ತಿಲ್ಲ, ಪ್ರತಿದಿನ ಪಾರ್ಕಿಂಗ್‌ನತ್ತ ಕಣ್ಣಾಡಿಸುತ್ತೇನೆ. ಬುದ್ಧಿ ಬೇಡ ಬೇಡ ಎಂದರೂ ಮನಸ್ಸು ಒಮ್ಮೆ ನೋಡು ಎಂದು ಹೇಳುತ್ತದೆ. ನೋಡಿಯೇ ಬಿಡುತ್ತೇನೆ. ಮನಸ್ಸಲ್ಲಿ ಅಸ್ಪಷ್ಟವಾಗಿ ಮಳೆ ಹುಡುಗ ಬರುತ್ತಾನೆ.
ಆಶಿಕಾ ಸಾಲೆತ್ತೂರು
ದ್ವಿತೀಯ ಬಿಎ (ಪತ್ರಿಕೋದ್ಯಮ), ವಿವೇಕಾನಂದ ಕಾಲೇಜು, ಪುತ್ತೂರು