Advertisement

ದೋಸ್ತಿ ಸಚಿವರ ಮಾತಿನ ಕಾಳಗ

06:00 AM Sep 26, 2018 | Team Udayavani |

ಚಾಮರಾಜನಗರ: “ನಾವು ಕಾಂಗ್ರೆಸ್‌ನವರು ಮನಸ್ಸು ಮಾಡಿದರೆ ಮಹೇಶನನ್ನು ಕ್ಯಾಬಿನೆಟ್‌ನಿಂದಲೇ ತೆಗೆಸಿ ಹಾಕಿಬಿಡುತ್ತೇವೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗ ಶೆಟ್ಟಿಯವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌. ಮಹೇಶ್‌ ವಿರುದ್ಧ ಏಕವಚನದಲ್ಲಿ ಕಿಡಿಕಾರಿದ ಪ್ರಸಂಗ ನಡೆದಿದೆ.

Advertisement

ತಾಲೂಕಿನ ಕುದೇರು ಗ್ರಾಮಕ್ಕೆ ಭೇಟಿ ನೀಡಿದ್ದ ಅವರು, ಕೊಳ್ಳೇಗಾಲದಲ್ಲಿ ಎನ್‌.ಮಹೇಶ್‌ ಅವರು ನೀಡಿದ್ದಾರೆ ಎನ್ನಲಾಗಿದ್ದ ಹೇಳಿಕೆ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಕೆಂಡಾಮಂಡಲ ರಾದರು. “ಅವನ್ಯಾರು ಕಾಂಗ್ರೆಸ್‌ ಕಿತ್ತು ಹಾಕೋಕೆ. ಅವನೇ ಕಿತ್ತು ಹೋಗ್ತಾನೆ. ಅವನು ಒನ್‌ ಮ್ಯಾನ್‌ ಆರ್ಮಿ. ನಾವು 80 ಜನ ಇದ್ದೇವೆ. ಜನತಾ ದಳ 37 ಜನರಿದ್ದಾರೆ. ನಾವು ಒಂದು ನಿಮಿಷ ಮನಸ್ಸು ಮಾಡಿದರೆ ಎನ್‌. ಮಹೇಶ್‌ ಉಳಿಯಲ್ಲ’ ಎಂದರು.

 “ಎನ್‌. ಮಹೇಶ್‌ ಏನೋ ಒಂಥರಾ ಕನಸು ಕಾಣುತ್ತಿದ್ದಾನೆ. ಈಗ ತಾನೇ ಕಣ್ಣು ಬಿಟ್ಟಿದ್ದೀನಿ ಅಂತ ಅವನಿಗೆ ಗೊತ್ತಿಲ್ಲ ಪಾಪ! ಅವನು ಹೀಗಾಗಬೇಕಾದರೆ ಎಷ್ಟು ಕಷ್ಟ ಬಿದ್ದಿದ್ದಾನೆ. ಈ ರೀತಿ ಹೇಳಿಕೆಗಳನ್ನು ಕೊಡಬಾರದು. ಕೊಟ್ಟರೆ ಅವನೇ ಕಿತ್ತು ಹೋಗ್ತಾನೆ. ಏನೋ ಅಪ್ಪಿತಪ್ಪಿ ಅವನ ಪುಣ್ಯಕ್ಕೆ ಸಚಿವ ಸ್ಥಾನ ಸಿಕ್ಕಿದೆ. ಅವನೇನು ದೀರ್ಘ‌ ಕಾಲ ರಾಜಕೀಯ ಮಾಡಿ ಬಂದಿಲ್ಲ. ನಾವು ಕಾಂಗ್ರೆಸ್‌ನವರು ಮನಸ್ಸು ಮಾಡಿದರೆ ಕ್ಯಾಬಿನೆಟ್‌ನಿಂದ ಅವನನ್ನು ತೆಗೆಸಿ ಹಾಕಿಬಿಡ್ತೀವಿ. ಅದನ್ನು ತಿಳಿದುಕೊಳ್ಳಬೇಕು’ ಎಂದು ಕಿಡಿಕಾರಿದರು.

“ಅವನು ಬೆಳೆಯಬೇಕು. ಅದು ಬಿಟ್ಟು ಕಾಂಗ್ರೆಸ್‌ ಕೀಳ್ಳೋಕೆ ಇವನ್ಯಾವ ಮಹಾ ಲೀಡರು ಅಂತಾರೀ? ಎಂತೆಂಥ ಅತಿರಥ ಮಹಾರಥರೇ ಕಾಂಗ್ರೆಸ್‌ನ ಏನೂ ಮಾಡಕ್ಕಾಗಲಿಲ್ಲ. ಮುಂದಿನ ಲೋಕಸಭಾ ಚುನಾವಣೇಲಿ ಬಿಜೆಪಿನೇ ಹೊರಟು ಹೋಗುತ್ತೆ. ಸೆಂಟ್ರಲ್‌ನಲ್ಲಿ ಕಾಂಗ್ರೆಸ್ಸೇ ಬರೋದು. ನಮ್ಮದು ಹೆಮ್ಮರ’ ಎಂದು ಪುಟ್ಟರಂಗಶೆಟ್ಟಿ ಪ್ರತಿಪಾದಿಸಿದರು.

ಕಾಂಗ್ರೆಸ್‌ಗೆ ಅಹಂಕಾರ
ಇತ್ತ ಪುಟ್ಟರಂಗಶೆಟ್ಟಿ ಅವರು ಕಿಡಿಕಾರುತ್ತಿದ್ದಂತೆ ಅತ್ತ ಕಾರವಾರದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಎನ್‌. ಮಹೇಶ್‌, ನನ್ನನ್ನು ಸಂಪುಟದಿಂದ ತೆಗೆದುಹಾಕುವ ಅಧಿಕಾರ ಇರುವುದು ಸಿಎಂ ಕುಮಾರಸ್ವಾಮಿ ಮತ್ತು ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರಿಗೆ ಮಾತ್ರ, ಪುಟ್ಟರಂಗಶೆಟ್ಟಿ ಅವರಿಗೆ ಯಾವುದೇ ಅಧಿಕಾರವಿಲ್ಲ ಎಂದಿದ್ದಾರೆ. ಜತೆಗೆ ಕಾಂಗ್ರೆಸ್‌ಗೆ ತಾನೇ ದೊಡ್ಡಣ್ಣ ಎಂಬ ಅಹಂಕಾರ ಇದೆ. ಇದರಿಂದ ಛತ್ತೀಸ್‌ಗಢದಲ್ಲಿ ಬಿಎಸ್‌ಪಿ ಕಾಂಗ್ರೆಸ್‌ಗೆ ನೀಡಿದ್ದ ಬೆಂಬಲ ಹಿಂಪಡೆ ದಿದೆ. ಅಹಂಕಾರದಿಂದ ಕೆಳಗಿಳಿದರೆ ನಮ್ಮಂಥ‌ವರು ಅವರ ಜತೆ ಕೈ ಜೋಡಿಸುತ್ತಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ನಮ್ಮ ಜತೆ ಚೆನ್ನಾಗಿದೆ ಎಂದಿದ್ದಾರೆ.

Advertisement

ಮಹೇಶ್‌ ಹೇಳಿದ್ದೇನು?
ಶಿಕ್ಷಣ ಸಚಿವ ಮಹೇಶ್‌ ಸೆ. 21ರಂದು ಕೊಳ್ಳೇಗಾಲದಲ್ಲಿ ಕೇಂದ್ರ ಸರಕಾರದ ಸ್ವತ್ಛ ಪಖ್ವಾಡ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ್ದರು. ಕೇಂದ್ರ ಸರಕಾರದ ಯೋಜನೆಯಾದ ಸ್ವಚ್ಛತಾ ಪಕ್ವಾಡ್‌ ಕಾರ್ಯಕ್ರಮ ವನ್ನು ಸಾಂಕೇತಿಕವಾಗಿ ಕಾಂಗ್ರೆಸ್‌ ಗಿಡ ಕಡಿಯೋ ಮೂಲಕ ಮಾಡಿದ್ದೇವೆ ಎಂದಿದ್ದರು. ಕಾಂಗ್ರೆಸ್‌ ಗಿಡ ಬಹಳ ಅಪಾಯ ಎಂದಿದ್ದರು. ಆಗ ಪಕ್ಕದಲ್ಲಿದ್ದವರು ಅದು ಪಾರ್ಥೇನಿಯಂ ಗಿಡ ಅಂದಿದ್ದರು. ಆಗ ಮಹೇಶ್‌ ಕಾಂಗ್ರೆಸ್‌ ಗಿಡ ಅಂತ ತಾನೇ ಕರೆ ಯೋದು ಎಂದು ಸೂಚ್ಯವಾಗಿ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next